


ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್. ಕೋದಂಡರಾಮಯ್ಯ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ಮಗುವಿಗೂ ಉತ್ತಮ ಶಿಕ್ಷಣ ಸಿಗುವಂತೆ ಸರ್ಕಾರದೊಂದಿಗೆ ದಾನಿಗಳೂ ಕೈಜೋಡಿಸಬೇಕು ಎಂದರು. ಇದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾನವಾಗಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎನ್. ಹರಿಕುಮಾರ್ ಮಾತನಾಡಿ, ಮಕ್ಕಳೇ ದೇಶದ ನಿಜವಾದ ಸಂಪತ್ತು. ಜಾತಿ, ಧರ್ಮ, ಭಾಷೆ ಬೇಧವಿಲ್ಲದೆ ಎಲ್ಲಾ ಮಕ್ಕಳಿಗೂ ಸಮಾನ ಕಲಿಕೆಯ ಅವಕಾಶ ದೊರೆಯಬೇಕು. ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣ ಪಡೆದಾಗ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ನ್ಯಾಷನಲ್ ಹೈಸ್ಕೂಲ್ ಶಾಲೆಯ ಮೇಲುಸ್ತುವಾರಿ ಸಮಿತಿ ಸದಸ್ಯ ಎಂ.ಪಿ. ರಮೇಶ್ ಬಾಬು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದಾಖಲಿಸಿಕೊಂಡು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಇಂತಹ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಮರ್ಥರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಶಾಂತ್ ವಿ. ರೆಡ್ಡಿ ತಮ್ಮ ತಂದೆಯವರ ಸ್ಮರಣಾರ್ಥ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಸ್.ಟಿ. ನಾರಾಯಣಸ್ವಾಮಿ, ಕರವೇ ಯಲ್ದೂರು ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಎಲ್. ಮುರಳಿ ಮೋಹನ್, ಮುಖ್ಯ ಶಿಕ್ಷಕಿ ಎಂ. ಮುನಿರತ್ನಮ್ಮ ಹಾಗೂ ಸಹ ಶಿಕ್ಷಕರಾದ ಎನ್. ನಳಿನಿ, ಎಸ್. ಆದಿಲ್ ಪಾಷಾ, ಎಲ್.ವಿ. ಲಕ್ಷ್ಮೀ ಉಪಸ್ಥಿತರಿದ್ದರು.

