(ವರದಿ: ಶಬ್ಬಿರ್ ಅಹ್ಮದ್)
ಬಿಸಿಗಾಳಿ–ಜಾಗತಿಕ ಉದ್ವಿಗ್ನತೆ ಡಬಲ್ ಹೊಡೆತ : ಶ್ರೀನಿವಾಸಪುರ ಮಾವು ಸುಗ್ಗಿಗೆ ಆತಂಕದ ನೆರಳು ,ಇಳುವರಿ ಶೇ.30ರಷ್ಟೇ ಸಾಧ್ಯತೆ ಬೆಲೆ, ರಫ್ತು, ಪಲ್ಪ್ ಉದ್ಯಮಕ್ಕೂ ಸಂಕಷ್ಟ ಪಶ್ಚಿಮ ಏಷ್ಯಾ ಉದ್ವಿಗ್ನತೆ ಪರಿಣಾಮದ ಭೀತಿ ಉಂಟಾಗಿದೆ

ಶ್ರೀನಿವಾಸಪುರ ರಾಜ್ಯದ ಮಾವುನಾಡು ಎಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಈ ಬಾರಿಯ ಮಾವು ಸುಗ್ಗಿ ಆರಂಭಕ್ಕೂ ಮುನ್ನವೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ತೀವ್ರ ಬಿಸಿಗಾಳಿ, ಇಳುವರಿ ಕುಸಿತ, ಮಾರುಕಟ್ಟೆ ಅನಿಶ್ಚಿತತೆ, ಪಲ್ಪ್ ಉದ್ಯಮದ ಸಂಕಷ್ಟ ಹಾಗೂ ಪಶ್ಚಿಮ ಏಷ್ಯಾದ ಉದ್ವಿಗ್ನತೆ— ಈ ಎಲ್ಲ ಅಂಶಗಳು ಸೇರಿ ತಾಲೂಕಿನ ಮಾವು ಆಧಾರಿತ ಆರ್ಥಿಕತೆಯ ಮೇಲೆ ಕತ್ತಲೆ ನೆರಳು ಮೂಡಿಸಿವೆ.
ಸಾಮಾನ್ಯವಾಗಿ ಸುಗ್ಗಿ ಸಮಯದಲ್ಲಿ ಚಟುವಟಿಕೆಯಿಂದ ಕಂಗೊಳಿಸುವ ಮಾರುಕಟ್ಟೆ ಪ್ರದೇಶಗಳಲ್ಲಿ ಈ ಬಾರಿ ನಿರೀಕ್ಷೆಯ ಬದಲು ಆತಂಕದ ಮಾತುಗಳೇ ಹೆಚ್ಚು ಕೇಳಿಬರುತ್ತಿವೆ. ಸುಮಾರು 65 ಸಾವಿರ ಎಕರೆ ವ್ಯಾಪ್ತಿಯ ಮಾವಿನ ತೋಟಗಳು ಶ್ರೀನಿವಾಸಪುರದ ಕೃಷಿ ಜೀವನಾಡಿಯಾಗಿದ್ದು, ಸಾವಿರಾರು ರೈತ ಕುಟುಂಬಗಳು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಪ್ಯಾಕಿಂಗ್ ಘಟಕಗಳು ಹಾಗೂ ಪಲ್ಪ್ ಉದ್ಯಮಗಳು ಇದರ ಸುತ್ತಲೇ ಬದುಕು ಕಟ್ಟಿಕೊಂಡಿವೆ.
ಬಿಸಿಗಾಳಿಗೆ ಹೂ-ಕಾಯಿ ಉದುರಿಕೆ
ಈ ವರ್ಷ ಆರಂಭದಲ್ಲಿ ಉತ್ತಮ ಹೂ ಬಿಡುವಿಕೆ ಕಂಡು ಬಂದಿದ್ದರಿಂದ ಉತ್ತಮ ಫಸಲು ನಿರೀಕ್ಷೆ ಮೂಡಿಸಿತ್ತು. ಆದರೆ ಬಳಿಕ ಉಷ್ಣಾಂಶ ಏರಿಕೆ, ಬಿಸಿಗಾಳಿ ಮತ್ತು ಅವಕಾಲಿಕ ವಾತಾವರಣದಿಂದ ಹೂ ಸುಡುವುದು, ಚಿಗುರು ಮಾವು ಉದುರುವುದು ಹೆಚ್ಚಾಗಿದೆ.
ವ್ಯಾಪಾರ ವಲಯದ ಅಂದಾಜಿನ ಪ್ರಕಾರ ಈ ಬಾರಿ ಸಾಮಾನ್ಯ ಇಳುವರಿಯ ಶೇ.30ರಷ್ಟೇ ದೊರೆಯುವ ಸಾಧ್ಯತೆ ಇದೆ.
ಮಾವು ಬೆಳೆಗಾರ ಬಿ.ಎ. ಸಯ್ಯದ್ ಫಾರೂಕ್ ಮಾತನಾಡಿ, ಈ ಬಾರಿ ಹೂವಿನ ಹಂತದಲ್ಲೇ ಬಿಸಿಗಾಳಿಯಿಂದ ದೊಡ್ಡ ಹೊಡೆತ ಬಿದ್ದಿದೆ. ಆರಂಭದಲ್ಲಿ ಉತ್ತಮ ಫಸಲು ನಿರೀಕ್ಷೆ ಇತ್ತು. ಆದರೆ ಈಗ ಇಳುವರಿ ತೀವ್ರವಾಗಿ ಕುಸಿಯುವ ಲಕ್ಷಣಗಳಿವೆ. ಔಷಧಿ, ಕಾರ್ಮಿಕ, ನೀರಾವರಿ ವೆಚ್ಚ ಏರಿಕೆಯಿಂದ ರೈತ ಸಂಕಷ್ಟದಲ್ಲಿದ್ದಾನೆ. ಸರ್ಕಾರ ತುರ್ತು ನೆರವಿಗೆ ಬರಬೇಕು, ಎಂದು ಒತ್ತಾಯಿಸಿದರು.
ಎರಡು ತಿಂಗಳಿಗೆ ಸೀಮಿತವಾಗುವ ಸುಗ್ಗಿ ?
ಪ್ರತಿ ವರ್ಷ ಮೇ 10ರಿಂದ ಆರಂಭವಾಗುವ ಮಾವು ಮಾರುಕಟ್ಟೆ ಚಟುವಟಿಕೆಗಳು ಈ ಬಾರಿಯೂ ಆರಂಭವಾಗಲಿವೆ. ಆದರೆ ಕಡಿಮೆ ಇಳುವರಿಯಿಂದ ಚಟುವಟಿಕೆಗಳು ಕೇವಲ ಎರಡು ತಿಂಗಳಿಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ.
ಇದೇ ವೇಳೆ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾವು ಹರಿದುಬರುವ ಸಾಧ್ಯತೆಯಿಂದ ಸ್ಪರ್ಧೆಯೂ ಹೆಚ್ಚಲಿದೆ.
ಸಾಮಾನ್ಯ ವರ್ಷಗಳಲ್ಲಿ ಹರಾಜು, ಸಾಗಾಟ, ಕಾರ್ಮಿಕ ಬೇಡಿಕೆ, ಪ್ಯಾಕಿಂಗ್ ಚಟುವಟಿಕೆಗಳು ಗರಿಗೆದರಿರುತ್ತವೆ. ಆದರೆ ಈ ಬಾರಿ ಅವುಗಳ ಮೇಲೂ ಪರಿಣಾಮ ಬೀಳುವ ಆತಂಕ ಇದೆ.
ಹೂಡಿಕೆ ವಾಪಸ್ ಅನುಮಾನ
ರೈತರು ಔಷಧಿ, ರಸಗೊಬ್ಬರ, ನೀರಾವರಿ ಹಾಗೂ ತೋಟ ನಿರ್ವಹಣೆಗೆ ದೊಡ್ಡ ಹೂಡಿಕೆ ಮಾಡಿದ್ದಾರೆ. ವ್ಯಾಪಾರಸ್ಥರು ಮುಂಗಡವಾಗಿ ತೋಟಗಳನ್ನು ಖರೀದಿಸಿ ಹಣ ಹೂಡಿದ್ದಾರೆ. ಆದರೆ ಇಳುವರಿ ಕುಸಿತದಿಂದ ಲಾಭದ ನಿರೀಕ್ಷೆ ಮಸುಕಾಗಿದೆ.
ರೈತರು ಮಾಡಿದ ಹೂಡಿಕೆ ವಾಪಸ್ ಬರುವುದೇ ಅನುಮಾನ. ಬೆಳೆ ಕಡಿಮೆಯಾದರೆ ಗ್ರಾಮೀಣ ಆರ್ಥಿಕತೆಯೇ ಹೊಡೆತ ತಿನ್ನಲಿದೆ, ಎಂದು ಬಿ.ಎ. ಸಯ್ಯದ್ ಫಾರೂಕ್ ಅಭಿಪ್ರಾಯಪಟ್ಟರು.
ಪಲ್ಪ್ ಉದ್ಯಮಕ್ಕೂ ಕಚ್ಚಾ ವಸ್ತು ಕೊರತೆ ಭೀತಿ
ಈ ಭಾಗದ ಪ್ರಮುಖ ಆರ್ಥಿಕ ಚಟುವಟಿಕೆಗಳಲ್ಲಿ ಒಂದಾದ ಮಾವು ಪಲ್ಪ್ ಉದ್ಯಮವೂ ಈ ಬಾರಿ ಚಿಂತೆಯಲ್ಲಿದೆ. ಕಡಿಮೆ ಇಳುವರಿ ಪಲ್ಪ್ ಘಟಕಗಳಿಗೆ ಕಚ್ಚಾ ವಸ್ತು ಕೊರತೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆ ಅನಿಶ್ಚಿತತೆ, ಸಾಗಾಣಿಕೆ ವೆಚ್ಚ ಏರಿಕೆ ಹಾಗೂ ರಫ್ತು ಸವಾಲುಗಳಿಂದ ಉದ್ಯಮದ ಮೇಲೂ ಒತ್ತಡ ಹೆಚ್ಚುತ್ತಿದೆ.
ಮ್ಯಾಂಗೋ ಜ್ಯೂಸ್ ಫ್ಯಾಕ್ಟರಿ ಪೂರೈಕೆದಾರ ಟಿಎಕೆ ಕೆ.ಅಯಾಝ್ ಅಹ್ಮದ್ ಮಾತನಾಡಿ, ಕಡಿಮೆ ಇಳುವರಿಯಿಂದ ಪಲ್ಪ್ ಘಟಕಗಳಿಗೆ ಕಚ್ಚಾ ವಸ್ತು ಪೂರೈಕೆಯ ಮೇಲೆಯೇ ಒತ್ತಡ ನಿರ್ಮಾಣವಾಗಿದೆ. ಪಶ್ಚಿಮ ಏಷ್ಯಾ ಉದ್ವಿಗ್ನತೆ ಮುಂದುವರಿದರೆ ಕಂಟೈನರ್ ದರ, ಸಾಗಾಣಿಕೆ ವೆಚ್ಚ ಏರಿಕೆಯಿಂದ ರಫ್ತು ವಲಯಕ್ಕೂ ಹೊಡೆತ ಬೀಳಬಹುದು. ಸರ್ಕಾರ ರಫ್ತು ವಲಯಕ್ಕೆ ವಿಶೇಷ ನೆರವು ನೀಡಬೇಕು, ಎಂದರು.
ಪಶ್ಚಿಮ ಏಷ್ಯಾ ಉದ್ವಿಗ್ನತೆ ಪರಿಣಾಮ
ಅಮೆರಿಕಾ–ಇರಾನ್ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ ಕುರಿತ ಅನಿಶ್ಚಿತತೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಒತ್ತಡ ತಂದಿದೆ. ತೈಲ ಬೆಲೆ ಏರಿಕೆ ಭೀತಿ, ಸಾಗಾಣಿಕೆ ವೆಚ್ಚ ಹೆಚ್ಚಳ, ಕಂಟೈನರ್ ದರ ಏರಿಕೆ ಹಾಗೂ ಜಾಗತಿಕ ಖರೀದಿ ಮಂದಗತಿ ಉಂಟಾದರೆ ಶ್ರೀನಿವಾಸಪುರದ ಪಲ್ಪ್ ರಫ್ತು ವಲಯಕ್ಕೂ ಪರೋಕ್ಷ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.
ಟಿ.ಎಂ.ಬಿ ಮಾವು ಮಂಡಿ ಮಾಲೀಕರಾದ ಟಿ. ಮೊಹಮ್ಮದ್ ಇರ್ಷಾದ್ ಮಾತನಾಡಿ, ಮಾವು ಸುಗ್ಗಿ ಶ್ರೀನಿವಾಸಪುರದ ಆರ್ಥಿಕ ಚಕ್ರದ ಹೃದಯ. ಈ ಬಾರಿಯ ಪರಿಸ್ಥಿತಿ ರೈತರಿಗಷ್ಟೇ ಅಲ್ಲ, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಪಲ್ಪ್ ಉದ್ಯಮ ಎಲ್ಲರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ, ಎಂದರು.
ವಿಶೇಷ ಪ್ಯಾಕೇಜ್ಗೆ ರೈತರ ಆಗ್ರಹ
ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರ, ಬೆಲೆ ರಕ್ಷಣೆ, ಪ್ರೋತ್ಸಾಹಧನ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರೈತರು ಸರ್ಕಾರ ಹಾಗೂ ತೋಟಗಾರಿಕಾ ಇಲಾಖೆಗೆ ಆಗ್ರಹಿಸಿದ್ದಾರೆ.
ಸುಗ್ಗಿ ಆರಂಭವಾದ ಬಳಿಕವೇ ನೈಜ ಸ್ಥಿತಿ ಸ್ಪಷ್ಟವಾಗಲಿದ್ದರೂ, ಪ್ರಕೃತಿ ವೈಪರೀತ್ಯ, ಮಾರುಕಟ್ಟೆ ಅನಿಶ್ಚಿತತೆ, ರಫ್ತು ಸವಾಲುಗಳ ಜೊತೆಗೆ ಜಾಗತಿಕ ಉದ್ವಿಗ್ನತೆಯ ತ್ರಿವಳಿ ಹೊಡೆತದಿಂದ ಈ ಬಾರಿಯ ಸುಗ್ಗಿ ನಿರೀಕ್ಷೆಗಿಂತ ಆತಂಕದ ಸುಗ್ಗಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸ್ಥಳೀಯ ಆರ್ಥಿಕ ಚಕ್ರದ ಹೃದಯವಾಗಿರುವ ಮಾವು ಬೆಳೆ ಈ ಬಾರಿ ಯಾವ ಮಟ್ಟಿಗೆ ಉಳಿಯಲಿದೆ ಎಂಬುದರ ಮೇಲೆ ಸಾವಿರಾರು ಕುಟುಂಬಗಳ ಬದುಕಿನ ಭವಿಷ್ಯ ನಿಂತಿದೆ. ಸರ್ಕಾರದ ಬೆಂಬಲ ಹಾಗೂ ಸುಗ್ಗಿಯ ನೈಜ ಫಲಿತಾಂಶದತ್ತ ಈಗ ರೈತ ಸಮುದಾಯದ ಚಿತ್ತ ನೆಟ್ಟಿದೆ.

1) ಮಾವು ಬೆಳೆಗಾರ ಬಿ.ಎ. ಸಯ್ಯದ್ ಫಾರೂಕ್

2) ಮ್ಯಾಂಗೋ ಜ್ಯೂಸ್ ಫ್ಯಾಕ್ಟರಿ ಪೂರೈಕೆದಾರ ಟಿ.ಎ.ಕೆ. ಕೆ.ಅಯಾಝ್ ಅಹ್ಮದ್

3) ಟಿ.ಎಂ.ಬಿ ಮಾವು ಮಂಡಿ ಮಾಲೀಕರಾದ ಟಿ. ಮೊಹಮ್ಮದ್ ಇರ್ಷಾದ್


