

ಶ್ರೀನಿವಾಸಪುರ, ಸೆಪ್ಟೆಂಬರ್ 22 : ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಸರ್ಕಾರ ಇಡಬೇಕಾದ ಹೆಜ್ಜೆಗಳನ್ನು ಗುರುತಿಸುವಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಹತ್ವದ ಪಾತ್ರವಹಿಸಲಿದ್ದು, ರಾಜ್ಯದ ಮುಂದಿನ ಪೀಳಿಗೆಯ ಒಳಿತಿಗಾಗಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಹಶೀಲ್ದಾರ್ ಜಿ.ಎನ್. ಸುದೀಂದ್ರ ಹೇಳಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಬಡಾವಣೆಯಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಈ ಸಮೀಕ್ಷೆಯ ಉದ್ದೇಶ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ವಾಸ್ತವಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದು. ಸಮುದಾಯಗಳ ಅಂಕಿಅಂಶಗಳೊಂದಿಗೆ ಆರ್ಥಿಕ ಪರಿಸ್ಥಿತಿಯನ್ನೂ ಸಂಗ್ರಹಿಸಲಾಗುತ್ತದೆ. ಸರ್ಕಾರದ ಪರವಾಗಿ ನಡೆಯುತ್ತಿರುವ ಈ ಸಮೀಕ್ಷೆಗೆ ಸಾರ್ವಜನಿಕರು ಸಂಪೂರ್ಣ ಸಹಕರಿಸಬೇಕು. ಸಮೀಕ್ಷೆಯ ವೇಳೆ ಕೇಳಲಾಗುವ 60 ವಿಷಯಗಳಿಗೆ ಸವಿವರವಾಗಿ ಮಾಹಿತಿಯನ್ನು ನೀಡಿ, ನೀಡಿದ ಮಾಹಿತಿಯ ಒಪ್ಪಿಗೆಯಾಗಿ ಸಹಿ ಮಾಡುವುದು ಅಗತ್ಯ” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಪ್ರಸನ್ನ, ವಸತಿ ನಿಲಯ ಮೇಲ್ವಿಚಾರಕರು ಲತಾ, ರಾಜೇಶ್ವರಿ, ರೇವಣಪ್ಪ, ಸಿಬ್ಬಂದಿ ಅವಿನಾಶ್, ಡಿಪಿಒ ಬೈರಾರೆಡ್ಡಿ, ಸಿಆರ್ಪಿ ರಾಧಾಕೃಷ್ಣ, ಡಾ|| ಚಂದ್ರಕಳಾ ಶ್ರೀನಿವಾಸನ್, ನೋಡಲ್ ಅಧಿಕಾರಿ ಶ್ರೀನಿಧಿ, ಗಣತಿದಾರ ನಜಿಯಾ ಬೇಗಂ, ಪುರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ. ಬಿ. ಮುಕ್ತಿಯಾರ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


