

ಕೋಲಾರ : ನಗರದ ಅನೇಕ ವಾರ್ಡ್ಗಳಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಹೂಳು ತುಂಬಿ ಪರಿಸರದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ. ಮಳೆನೀರು ಹೊರಹರಿವು ಅಸಾಧ್ಯವಾಗಿರುವುದರಿಂದ ಹಲವೆಡೆ ಗಂಡಾಂತರದ ಪರಿಸ್ಥಿತಿ ಎದುರಾಗಿದ್ದು, ಸೊಳ್ಳೆಗಳ ವೃದ್ಧಿಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ.
ನಗರದ ಸ್ವಚ್ಛತೆಗೆ ಸಂಬಂಧಿಸಿದ ತುರ್ತು ಕ್ರಮಕ್ಕೆ ಒತ್ತಾಯಿಸುತ್ತಾ ಹಿರಿಯ ಪತ್ರಕರ್ತ ಹಾಗೂ ಮನ್ವಂತರ ಪ್ರಕಾಶನದ ಅಧ್ಯಕ್ಷರಾದ ಪಾ.ಶ್ರಿ. ಅನಂತರಾಮ್ ನಗರಸಭೆಯ ಆಡಳಿತ ವರ್ಗ ಮತ್ತು ಸದಸ್ಯರ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅಂತರಗಂಗೆ ರಸ್ತೆಯ ಉದ್ಯೋಗ ವಿನಿಮಯ ಕಚೇರಿ (ಪತ್ರಕರ್ತರ ಭವನ) ಮುಂಭಾಗ ಚರಂಡಿ ತಿಂಗಳಗಳಿಂದ ಬ್ಲಾಕ್ ಆಗಿ ದುರ್ವಾಸನೆ ಮತ್ತು ಅಸೌಕರ್ಯ ಉಂಟುಮಾಡುತ್ತಿರುವುದನ್ನು ಕಳವಳದಿಂದ ಸೂಚಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಪ್ರತಿದಿನ ಜನಪರ ಕಾರ್ಯಕ್ರಮಗಳು ನಡೆಯುತ್ತಿವೆ. ಗಣ್ಯರು, ಹಿರಿಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಆದರೆ ಅವರ ಕಣ್ಣು ಮುಂದೆ ಇಂತಹ ಅಸೌಕರ್ಯ ಮುಂದುವರೆಯುತ್ತಿರುವುದು ನಾಚಿಕೆಗೆ ಕಾರಣವಾಗಿದೆ ಎಂದು ಅನಂತರಾಮ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರಸಭೆ ಆಯುಕ್ತರು ಹಾಗೂ ಅಧ್ಯಕ್ಷರು ತಕ್ಷಣ ಕ್ರಮ ಕೈಗೊಂಡು ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಶ್ರಮದಾನ ಶಿಬಿರ ನಡೆಸಿ ಮಾದರಿ ಸ್ಥಾಪಿಸಿ’
ಕೋಲಾರ ನಗರದ ಹಲವಾರು ವಾರ್ಡ್ಗಳಲ್ಲಿ ಚರಂಡಿ ತುರ್ತು ಶುದ್ಧೀಕರಣ ಅಗತ್ಯವಿರುವುದರಿಂದ ಜೆಸಿಬಿ ಯಂತ್ರ ಬಳಕೆಯ ಜೊತೆಗೆ ಸದಸ್ಯರು, ಸಿಬ್ಬಂದಿ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಒಂದು ವಾರ ಶ್ರಮದಾನ ಶಿಬಿರ ಏರ್ಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹೀಗೆ ಮಾಡಿದರೆ ಕೋಲಾರ ನಗರಸಭೆ ರಾಜ್ಯದ ಇತರೆ ಪುರಸಭೆಗಳಿಗೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಸ್ವಚ್ಛತಾ ಅಧ್ಯಯನ ಪ್ರವಾಸ ಫಲಕಾರಿ ಆಗಲಿ’
ಕೋಲಾರ ನಗರಸಭೆಯ ಪೌರಾಯುಕ್ತರು ಮತ್ತು ಕೆಲ ಸದಸ್ಯರು ಮಧ್ಯಪ್ರದೇಶಕ್ಕೆ ಸ್ವಚ್ಛತಾ ಅಧ್ಯಯನ ಪ್ರವಾಸ ಕೈಗೊಂಡಿರುವುದನ್ನು ಸ್ವಾಗತಿಸಿರುವ ಅವರು, ಅದರಿಂದ ಪಡೆದ ಅನುಭವವನ್ನು ಕೋಲಾರದ ಸ್ವಚ್ಛತೆ ಕಾಪಾಡಲು ಬಳಸಬೇಕು ಎಂದು ಸೂಚಿಸಿದ್ದಾರೆ.
ಮನ್ವಂತರ ಪ್ರಕಾಶನದಿಂದ ಸನ್ಮಾನ ಘೋಷಣೆ
ಚರಂಡಿ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ವಿಶೇಷ ಅಭಿಯಾನ ಕೈಗೊಂಡಲ್ಲಿ, ಮನ್ವಂತರ ಪ್ರಕಾಶನದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಿ ಸಿಬ್ಬಂದಿ ಮತ್ತು ಸದಸ್ಯರನ್ನು ಗೌರವಿಸಲಾಗುವುದು ಎಂದು ಅನಂತರಾಮ್ ತಿಳಿಸಿದ್ದಾರೆ.


