


ಶ್ರೀನಿವಾಸಪುರ: ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಲಭ್ಯವಿರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಸಲುವಾಗಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಲಾಯಿತು.
ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ. ಶ್ರೀನಿವಾಸ್ ಮಾತನಾಡಿ, ಇಲಾಖೆಯ ಸೌಲಭ್ಯಗಳು ಸೀಮಿತವಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರ ಪೈಕಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾವಿನ ತೋಟಗಳಲ್ಲಿ ಮಾವು ಸಂಸ್ಕರಣೆಗೆ ಸಂಬಂಧಿಸಿದ ಘಟಕಗಳನ್ನು ಸ್ಥಾಪಿಸಲು ಇಲಾಖೆಯಿಂದ ₹2.40 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದ್ದು, ಸಾಮಾನ್ಯ ವರ್ಗಕ್ಕೆ ಒಂದು ಘಟಕದ ಅವಕಾಶವಿದೆ ಎಂದು ಹೇಳಿದರು. ಈ ಬಾರಿ ಇಲಾಖೆಗೆ ಒಟ್ಟು 120 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.
ಕೃಷಿ ಹೊಂಡಗಳಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಇದುವರೆಗೆ ಯಾವುದೇ ಅನಾಹುತ ಸಂಭವಿಸದಿರುವುದು ಸಂತಸದ ಸಂಗತಿ. ಕೃಷಿ ಹೊಂಡ ನಿರ್ಮಿಸಿಕೊಂಡಿರುವ ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಹೊಂಡಗಳಿಗೆ ಕಡ್ಡಾಯವಾಗಿ ಬೇಲಿ ನಿರ್ಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪಿಡಿಪಿಎಸ್ ಯೋಜನೆಯಡಿ ತಾಲೂಕಿನಲ್ಲಿ ಇದುವರೆಗೆ ₹34.74 ಕೋಟಿ ಮೊತ್ತವನ್ನು ಮಾವು ಬೆಳೆಗಾರರಿಗೆ ನೀಡಲಾಗಿದೆ. ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅಗತ್ಯವಿರುವ ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಅಧಿಕಾರಿಗಳು ಸಿದ್ಧರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಸಹಾಯಕ ನಿರ್ದೇಶಕ ಕೆ. ಮಹೇಶ್, ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಎನ್. ರಾಜೇಶ್, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ರೂಪೇಶ್, ತೋಟಗಾರಿಕೆ ಅಧಿಕಾರಿಗಳಾದ ವಿ. ನವೀನ್, ರಮ್ಯಾರಾಣಿ, ಮಂಜು, ಎನ್. ಹರೀಶ್ ಕುಮಾರ್ ಸೇರಿದಂತೆ ರೈತರು ಉಪಸ್ಥಿತರಿದ್ದರು.

