

ಶ್ರೀನಿವಾಸಪುರ : ಕಳೆದ ಗುರುವಾರ ಮತ್ತು ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಪಟ್ಟಣದ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆ ನೀರು ಮನೆಗಳೊಳಗೆ ನುಗ್ಗಿ ಸಾರ್ವಜನಿಕರು ಹಲವು ಸಂಕಷ್ಟಗಳನ್ನು ಎದುರಿಸಿದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಜಿ.ಎನ್. ಸುದೀಂದ್ರ ಅವರ ನೇತೃತ್ವದ ತಂಡವು ಶನಿವಾರ ಸಂತೆ ಮೈದಾನ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಸ್ಥಳೀಯವಾಗಿ ಅವಲೋಕಿಸಿತು. ಇದೇ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು ಕೂಡ ಸ್ಥಳಕ್ಕೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮನೆಗಳಿಗೆ ಮಳೆ ನೀರು ನುಗ್ಗಲು ಕಾರಣವಾದ ನಾಳೆಗಳು ಹಾಗೂ ನೀರು ಹರಿವಿನ ಮಾರ್ಗಗಳನ್ನು ಪರಿಶೀಲಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅದರಂತೆ ಸೋಮವಾರ ತಹಶೀಲ್ದಾರ್ ಜಿ.ಎನ್. ಸುದೀಂದ್ರ ಹಾಗೂ ಪುರಸಭೆ ಅಧಿಕಾರಿಗಳ ತಂಡವು ಮತ್ತೆ ಸಂತೆ ಮೈದಾನ ಪ್ರದೇಶಕ್ಕೆ ಭೇಟಿ ನೀಡಿ, ಕಳೆದ ವಾರದ ಮಳೆಯಿಂದ ಹಾನಿಗೊಂಡ ಮನೆಗಳು ಹಾಗೂ ಸಾಮಗ್ರಿಗಳ ಕುರಿತು ಸಮೀಕ್ಷೆ ನಡೆಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಕಂದಾಯ ನಿರೀಕ್ಷಕ ಎನ್. ಶಂಕರ್, ಆರೋಗ್ಯ ನಿರೀಕ್ಷಕ ಟಿ. ವಿ. ಸುರೇಶ್, ಸಂತೋಷ್ ಹಾಗೂ ಸಿಬ್ಬಂದಿಗಳಾದ ಪ್ರತಾಪ್, ಗೌತಮ್ ಮತ್ತು ಯಲ್ಲೇಶ್ ಉಪಸ್ಥಿತರಿದ್ದರು.

