


ಶ್ರೀನಿವಾಸಪುರ: ಮಾವಿನ ಹಣ್ಣಿನ ಸೀಸನ್ ಹಿನ್ನೆಲೆಯಲ್ಲಿ ಎಪಿಎಂಸಿ ಹಾಗೂ ವಿವಿಧ ಮಾವು ಮಾರುಕಟ್ಟೆಗಳಿಗೆ ಪ್ರತಿದಿನ ನೂರಾರು ಟ್ರ್ಯಾಕ್ಟರ್ಗಳ ಮೂಲಕ ಮಾವಿನಕಾಯಿ ಮತ್ತು ಮಾವಿನ ಹಣ್ಣಿನ ಸಾಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಿ ಶ್ರೀನಿವಾಸಪುರ ಪೊಲೀಸರು ರೇಡಿಯಂ ಸ್ಟಿಕ್ಕರ್ ಅಳವಡಿಕೆ ಕುರಿತು ಜಾಗೃತಿ ಮೂಡಿಸಿದರು.
ಎಪಿಎಂಸಿ ಮಾವು ಮಾರುಕಟ್ಟೆ ಪ್ರದೇಶದಲ್ಲಿ ನಡೆದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಟ್ರ್ಯಾಕ್ಟರ್ಗಳ ಪರಿಶೀಲನೆ ನಡೆಸಿದ ಪೊಲೀಸರು, ವಾಹನಗಳ ಮುಂಭಾಗ ಮತ್ತು ಹಿಂಭಾಗಗಳಲ್ಲಿ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್ ಅಳವಡಿಸಿಕೊಳ್ಳುವಂತೆ ಚಾಲಕರು ಹಾಗೂ ಮಾಲೀಕರಿಗೆ ಸೂಚಿಸಿದರು.
ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ಸಂಚರಿಸುವ ಟ್ರ್ಯಾಕ್ಟರ್ಗಳು ದೂರದಿಂದಲೇ ಗೋಚರಿಸುವಂತೆ ಮಾಡಲು ರೇಡಿಯಂ ಸ್ಟಿಕ್ಕರ್ಗಳು ಸಹಕಾರಿಯಾಗುತ್ತವೆ. ಕತ್ತಲೆ ಹಾಗೂ ಮಂಜಿನ ವಾತಾವರಣದಲ್ಲಿಯೂ ವಾಹನಗಳ ಗುರುತಿಸುವಿಕೆಗೆ ನೆರವಾಗುವ ಮೂಲಕ ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ ಎಂದು ಪೊಲೀಸರು ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಶಂಕರಾಚಾರ್, ಪಿಎಸ್ಐ ಜಯರಾಮ್ ಹಾಗೂ ಸಿಬ್ಬಂದಿ ಚಾಲಕರಿಗೆ ಸಂಚಾರ ನಿಯಮ ಪಾಲನೆ, ಅತಿವೇಗ ತಪ್ಪಿಸುವುದು ಮತ್ತು ವಾಹನಗಳ ದೀಪ, ಇಂಡಿಕೇಟರ್ ಹಾಗೂ ರಿಫ್ಲೆಕ್ಟರ್ಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವ ಕುರಿತು ಸಲಹೆ ನೀಡಿದರು.
ಮಾವು ಸಾಗಾಟದ ಗರಿಷ್ಠ ಅವಧಿಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದರು.


