

ಕಾರವಾರ : ನಗರದ ಹೆದ್ದಾರಿಯಲ್ಲಿರುವ ಸುರಂಗ ಮಾರ್ಗದಲ್ಲಿ ತಡರಾತ್ರಿ ಸಂಭವಿಸಿದ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಗೋವಾ ಕಡೆಯಿಂದ ಕಾರವಾರ ಮಾರ್ಗವಾಗಿ ಪುತ್ತೂರು ಕಡೆಗೆ ತೆರಳುತ್ತಿದ್ದ ಅಲ್ಟೋ ಕಾರ್ ಚಾಲಕ, ಎದುರಿಗೆ ಇದ್ದ ಇನ್ನೊಂದು ಕಾರನ್ನು ಓವರ್ ಟೆಕ್ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರು ಚಲಾಯಿಸುತ್ತಿದ್ದ ಪುತ್ತೂರು ಮೂಲದ ರಂಜಿತ್ ಕುಮಾರ್ ವಿಶ್ವನಾಥ ನಾಯ್ಕ (35) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಂಜಿತ್ ಕುಮಾರ್ ನಾಯ್ಕ ಎಂಬ ವ್ಯಕ್ತಿ ಗೋವಾ ಕಡೆಯಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ. ಅಪಘಾತ ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಸುರಂಗ ಮಾರ್ಗದಲ್ಲಿ ನಡೆದಿದೆ. ಮತ್ತೊಂದು ಕಾರ್ ನಲ್ಲಿದ್ದ ಚಿಕ್ಕಬಳ್ಳಾಪುರದ ವಿವೇಕ್, ಗಿರೀಶ್, ಪವನ್ ಹಾಗೂ ಕಾರ್ ಚಾಲಕ ಗಣೇಶ ಎಂಬಾತನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಕಾರವಾರ ಕ್ರಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರವಾರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ,ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

