

ಶ್ರೀನಿವಾಸಪುರ : ರಾಜ್ಯ ಸರ್ಕಾರವು ತನ್ನ ಜನಪರ ಅನ್ನಭಾಗ್ಯ ಯೋಜನೆಗೆ ಹೊಸ ರೂಪ ನೀಡಿದ್ದು, ಬಡ ಹಾಗೂ ಅಲ್ಪ ಆದಾಯ ವರ್ಗದ ಫಲಾನುಭವಿಗಳಿಗೆ ಮತ್ತೊಂದು ಮಹತ್ವದ ಅನುಕೂಲವನ್ನು ಒದಗಿಸಿದೆ. ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಆಹಾರ ಕಿಟ್ ವಿತರಣೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಯ ಸದಸ್ಯ (ಡಿಎಲ್ ಸಿ ಕೋಲಾರ ) ಶಬ್ಬೀರ್ ಅಹ್ಮದ್ ಪಾಷಾ ಸರ್ಕಾರದ ಈ ಕ್ರಮವನ್ನು ಹರ್ಷದಿಂದ ಸ್ವಾಗತಿಸಿ, ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ನಿಜವಾದ ಜನಪರ ಹೆಜ್ಜೆಯಾಗಿದೆ. ಬಡವರ ಜೀವನಮಟ್ಟ ಸುಧಾರಿಸಲು ಹಾಗೂ ಅವರಿಗೆ ಪೌಷ್ಟಿಕ ಆಹಾರ ಖಚಿತಪಡಿಸಲು ಇದು ಮಹತ್ವದ ಕ್ರಮ. ಇಂತಹ ಯೋಜನೆಗಳು ಸಾಮಾಜಿಕ ನ್ಯಾಯದ ಬಲವರ್ಧನೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಕಿಟ್ನಲ್ಲಿ ಪೌಷ್ಟಿಕ ಆಹಾರ ಸಾಮಗ್ರಿಗಳು
ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ ಹೊಸ ಯೋಜನೆಯಡಿ ಪ್ರತಿ ಫಲಾನುಭವಿಗೆ ನೀಡಲಾಗುವ ಇಂದಿರಾ ಆಹಾರ ಕಿಟ್ನಲ್ಲಿ 5 ಕೆಜಿ ಅಕ್ಕಿ, ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳು ಒಳಗೊಂಡಿರಲಿವೆ. ಇದರಿಂದ ಬಿಪಿಎಲ್ ಕುಟುಂಬಗಳಿಗೆ ಕೇವಲ ಅಕ್ಕಿಯಷ್ಟೇ ಅಲ್ಲದೆ ದಿನನಿತ್ಯದ ಪೌಷ್ಟಿಕ ಆಹಾರದ ಅಗತ್ಯವನ್ನು ಪೂರೈಸುವ ಅವಕಾಶ ಸಿಗಲಿದೆ.
ಅಕ್ಕಿಯ ದುರ್ಬಳಕೆ ತಡೆಗಟ್ಟುವ ಹೊಸ ಮಾದರಿ
ಹಿಂದಿನ ಯೋಜನೆಯಲ್ಲಿ ಹೆಚ್ಚುವರಿ ಅಕ್ಕಿಯ ದುರ್ಬಳಕೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಕೆಲವರು ಅಕ್ಕಿಯನ್ನು ಮಾರಾಟ ಮಾಡುತ್ತಿದ್ದರೆ, ಕೆಲವು ಕಡೆಗಳಲ್ಲಿ ನಷ್ಟವೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಕಿಟ್ ರೂಪದಲ್ಲಿ ವಿತರಣೆ ಮಾಡುವ ಹೊಸ ಮಾದರಿಯನ್ನು ಸರ್ಕಾರ ಅಳವಡಿಸಿಕೊಂಡಿದೆ.
ರಾಜ್ಯ ಸರ್ಕಾರದ ಇಂದಿರಾ ಆಹಾರ ಕಿಟ್ ಯೋಜನೆ, ಅನ್ನಭಾಗ್ಯ ಯೋಜನೆಯ ಮುಂದಿನ ಹಂತವಾಗಿದ್ದು, ಪೌಷ್ಟಿಕತೆ ಹಾಗೂ ಜನಪರ ದೃಷ್ಟಿಯಿಂದ ಮಹತ್ವದ ಪರಿವರ್ತನೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.

