

ಶ್ರೀನಿವಾಸಪುರ: ಭಾರತದ ಪ್ರಥಮ ಶಿಕ್ಷಣ ಸಚಿವ ಹಾಗೂ ಪ್ರಜ್ಞಾವಂತ ಚಿಂತಕರಾದ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರದಾದ್ಯಂತ ಆಚರಿಸಲ್ಪಡುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಶ್ರೀನಿವಾಸಪುರದಲ್ಲಿಯೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಅಜಾದ್ ಅವರ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಶಿಕ್ಷಣ ತತ್ತ್ವಗಳನ್ನು ಸ್ಮರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕೈಯಲ್ಲಿ ಹಿಡಿದ ಪುಸ್ತಕಗಳು ಬೆಳಕಿನ ದೀಪಗಳಂತೆ ಕಾಂತ ಹರಡುತ್ತಿದ್ದ ದೃಶ್ಯ ಗಮನಸೆಳೆಯಿತು. ಶಿಕ್ಷಕರ ಮಾತುಗಳಲ್ಲಿ ವಿದ್ಯೆಯ ಮೌಲ್ಯ ಮತ್ತು ಮಾನವೀಯತೆ ಅರಳಿದವು.
ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲರು ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣವೇ ಮಾನವನ ನಿಜವಾದ ಶಕ್ತಿ. ಮೌಲಾನಾ ಅಜಾದ್ ಅವರ ಕನಸು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಭಾರತವನ್ನು ನಿರ್ಮಿಸುವುದು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ದೊಡ್ಡದಾಗಿರಿಸಿ ಅದನ್ನು ಸಾಧಿಸಲು ವಿದ್ಯೆಯನ್ನೇ ಕೈ ಹಿಡಿಯಬೇಕು, ಎಂದು ಹೇಳಿದರು.
ಉರ್ದು ಇಸಿಯೊ ಮಹಮ್ಮದ್ ಸಾಧಿಕ್ ಅವರು ಹೊಸ ಶಿಕ್ಷಣ ನೀತಿಯ ಮಹತ್ವ ಹಾಗೂ ಸಮಾನ ಅವಕಾಶಗಳ ಪ್ರಾಮುಖ್ಯತೆಯನ್ನು ವಿವರಿಸಿ, ಶಿಕ್ಷಣವು ಜೀವನಯಾತ್ರೆಯಲ್ಲಿ ದಿಕ್ಕು ತೋರಿಸುವ ದೀಪ ಎಂದು ಹೋಲಿಸಿದರು. ವಿದ್ಯಾರ್ಥಿಗಳಿಗೆ ಸಮೂಹ ಶಿಕ್ಷಣದ ಅರ್ಥವನ್ನು ತಿಳಿಸಿದರು.
ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕು ಕುರಿತು ಚರ್ಚಾ ವೃತ್ತ ನಡೆಸಿದರು. ಕೆಲವರು ಮೌಲಾನಾ ಅಜಾದ್ ಅವರ ಸ್ವಾತಂತ್ರ್ಯ ಹೋರಾಟದ ಪಾತ್ರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ಮಾತನಾಡಿದರು.
ರಾಧಾಕೃಷ್ಣ ಸಿ.ಆರ್.ಪಿ. ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, ಮೊಬೈಲ್ ವ್ಯಸನ ಅಪಾಯಕಾರಿ. ಪುಸ್ತಕವೇ ನಿಜವಾದ ಗೆಳೆಯ. ನಿಯಮಿತ ಅಭ್ಯಾಸ ಮತ್ತು ಪಠ್ಯಪಾಠಗಳಿಗೆ ಸಮಯ ನೀಡಿದರೆ ಉತ್ತಮ ಫಲಿತಾಂಶ ಖಚಿತ, ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಅರುಣ, ಆಸಿಫ್, ಚೌಡರೆಡ್ಡಿ, ಮಾನ್ಯ ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಯ ಸದಸ್ಯ ಶಬ್ಬೀರ್ ಅಹ್ಮದ್, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಮುಬಾರಕ್, ನವಾಜ್ ಹಾಗೂ ಹಲವರು ಉಪಸ್ಥಿತರಿದ್ದರು.





