

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತನ್ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರ ಆರೋಗ್ಯ ಹಾಗೂ ಕಲ್ಯಾಣದ ದೃಷ್ಟಿಯಿಂದ ಮಹತ್ವದ ಹಾಗೂ ಪ್ರಗತಿಪರ ನಿರ್ಧಾರ ಕೈಗೊಂಡಿದೆ.
ಮಹಿಳಾ ನೌಕರರಿಗೆ ಪ್ರತಿಮಾಸವೂ ಒಂದು ದಿನದ ಮಾಸಿಕ ಋತುಚಕ್ರ (ಮೆನ್ಸ್ಟ್ರುಯಲ್) ರಜೆ ನೀಡಲು ನಿಗಮ ಅನುಮೋದನೆ ನೀಡಿದ್ದು, ಈ ಸೌಲಭ್ಯವು 2026ರ ಜನವರಿ 1ರಿಂದ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಈ ಆದೇಶವನ್ನು ಜಾರಿಗೆ ತರಲಾಗಿದ್ದು, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ (ಐಎಎಸ್) ಅವರು ಅಧಿಕೃತ ವೃತ್ತಪತ್ರಿಕೆ ಹೊರಡಿಸಿದ್ದಾರೆ.
ಮಾಸಿಕ ಋತುಚಕ್ರ
ಅವಧಿಯಲ್ಲಿ ಮಹಿಳಾ ನೌಕರರು ಅನುಭವಿಸುವ ದೈಹಿಕ ನೋವು, ಅಸ್ವಸ್ಥತೆ, ದೌರ್ಬಲ್ಯ ಹಾಗೂ ಮಾನಸಿಕ ಒತ್ತಡವನ್ನು ಪರಿಗಣಿಸಿ ಈ ಮಾನವೀಯ ಮತ್ತು ಕಲ್ಯಾಣಾತ್ಮಕ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು
ಕೆಎಸ್ಆರ್ಟಿಸಿ ನಿಗಮ ತಿಳಿಸಿದೆ.
ಈ ಸೌಲಭ್ಯಕ್ಕೆ 18 ರಿಂದ 52 ವರ್ಷದೊಳಗಿನ, ಮಾಸಿಕ ಧರ್ಮಕ್ಕೆ ಒಳಪಡುವ ಎಲ್ಲಾ ಮಹಿಳಾ ನೌಕರರು ಅರ್ಹರಾಗಿರುತ್ತಾರೆ. ರಜೆಯನ್ನು ಪಡೆಯಲು ಯಾವುದೇ ರೀತಿಯ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಸಾಮಾನ್ಯ ಕ್ಯಾಶುಯಲ್ ರಜೆಗೆ ಅನುಮೋದನೆ ನೀಡುವ ಅಧಿಕಾರಿಯೇ ಮಾಸಿಕ ಋತುಚಕ್ರ ರಜೆಯನ್ನೂ ಮಂಜೂರು ಮಾಡಬಹುದು ಎಂದು ವೃತ್ತಪತ್ರಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾಸಿಕ ಋತುಚಕ್ರ ರಜೆಯನ್ನು ಹಾಜರಾತಿ ಹಾಗೂ ರಜೆ ದಾಖಲಾತಿ ಪಟ್ಟಿ (ಅಟೆಂಡೆನ್ಸ್ ಮತ್ತು ಲೀವ್ ರೆಜಿಸ್ಟರ್) ಯಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗುತ್ತದೆ. ಈ ರಜೆಯನ್ನು ಇತರ ಯಾವುದೇ ರಜೆಗಳೊಂದಿಗೆ ಸೇರಿಸುವ ಅವಕಾಶ ಇರುವುದಿಲ್ಲ. ಅಲ್ಲದೆ, ಬಳಸದೆ ಉಳಿದ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸುವ ಅಥವಾ ಸಂಗ್ರಹಿಸುವ ವ್ಯವಸ್ಥೆಯೂ ಇಲ್ಲ.
ಸಂಬಂಧಿಸಿದ ಮಹಿಳಾ ನೌಕರರು ಆ ತಿಂಗಳಲ್ಲೇ ಈ ರಜೆಯನ್ನು ಉಪಯೋಗಿಸಬೇಕಾಗುತ್ತದೆ.
ಈ ಆದೇಶವನ್ನು ಎಲ್ಲ ವಿಭಾಗಗಳಲ್ಲಿ ಗಂಭೀರವಾಗಿ ಜಾರಿಗೊಳಿಸಿ, ಸಮರ್ಪಕ ಅನುಷ್ಠಾನವಾಗುವಂತೆ ನೋಡಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕರು ಸಂಬಂಧಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಹಿಳಾ ನೌಕರರ ಆರೋಗ್ಯ ರಕ್ಷಣೆ, ಕೆಲಸದ ಒತ್ತಡ ಕಡಿತ, ಕಾರ್ಯಕ್ಷಮತೆ ಹೆಚ್ಚಳ ಹಾಗೂ ಮಾನವೀಯ ಕೆಲಸದ ವಾತಾವರಣ ನಿರ್ಮಾಣದ ದೃಷ್ಟಿಯಿಂದ ಈ ನಿರ್ಧಾರವನ್ನು ಸಾರ್ವಜನಿಕ ವಲಯದಲ್ಲಿ ಮಹತ್ವದ ಮತ್ತು ಮಾದರಿ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಮಹಿಳಾ ಸ್ನೇಹಿ ನೀತಿಗಳಿಗೆ ಇದು ಹೊಸ ದಿಕ್ಕು ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


