

ಕುಂದಾಪುರ: ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ನಿವಾಸಿ ಗಣೇಶ್ ಪ್ರಭು ಎಂದು ಗುರುತಿಸಲಾಗಿದೆ.
ಅ. 25ರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯ ಮೈಲಾರೇಶ್ವರ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ.
ಗಣೇಶ್ ಪ್ರಭು ಅವರು ಸಿಕೆಎಂ-9521 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ನಲ್ಲಿ ಸಂಗಮ್ ಕಡೆಯಿಂದ ನಗರ ಕಡೆಗೆ ರಸ್ತೆಯ ಎಡಬದಿಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಕುಂದಾಪುರ ನಗರಕಡೆಯಿಂದ ಸಂಗಮ್ ಕಡೆಗೆ ಕೆಎ-20-ಎಚ್ಜೆ-3667 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಸಹಸವಾರ ಸುಜನ್ನನ್ನು ಕೂರಿಸಿಕೊಂಡು ಬರುತ್ತಿದ್ದ ಅಕ್ಷಿತ್, ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಗಣೇಶ್ ಪ್ರಭು ಅವರ ಬೈಕ್ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಗಣೇಶ್ ಪ್ರಭು ಅವರ ತಲೆಗೆ ತೀವ್ರ ರಕ್ತಗಾಯವಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಗಾಯಾಳುವಿಗೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಮೆದುಳು ಪ್ರತಿಕ್ರಿಯಿಸದೆ ಗಂಭೀರ ಸ್ಥಿತಿಯಲ್ಲಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಣೇಶ್ ಪ್ರಭು ಎಸ್.ವಿ.ಎಸ್. ಎಂಬ ಎಲ್ಕ್ಟ್ರಾನಿಕ್ಸ್ ಸಂಸ್ಥೆ ನೆಡಸುತಿದ್ದು ಜನಪ್ರಿಯರಾಗಿದ್ದರು
ಅಪಘಾತದಲ್ಲಿ ಬೈಕ್ ಸವಾರ ಅಕ್ಷಿತ್ ಮುಖದ ಭಾಗಕ್ಕೆ ರಕ್ತಗಾಯವಾಗಿದ್ದು, ಸಹಸವಾರ ಸುಜನ್ ಸಣ್ಣಪುಟ್ಟ ಗಾಯಗೊಂಡಿದ್ದರು. ಸುಜನ್ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದು, ಅಕ್ಷಿತ್ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125(ಎ) ಮತ್ತು 125(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

