

ಕುಂದಾಪುರ: ಗುರುವಾರ ಸಂಜೆ ಸಿಡಿಲು ಸಹಿತ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ತ್ರಾಸಿ ಸಮೀಪದ ಮುಳ್ಳಿಕಟ್ಟೆಯ ಅರಾಟೆ ಸೇತುವೆಯ ಮೇಲೆ ನಡೆದಿದೆ. ಮೃತ ಕಾರ್ಮಿಕ ಪಂಜಾಬ್ ಮೂಲದ ಐ.ಆರ್.ಬಿ ಕಂಪನಿಯ ಕಾರ್ಮಿಕ ಅಶಿತೋಷ್ ಸಿಂಗ್ (35) ಎಂದು ತಿಳಿದು ಬಂದಿದೆ.ಇವರೊಂದಿಗೆ ಇದ್ದ ಮತ್ತೊಬ್ಬ ಕಾರ್ಮಿಕ ನವಜ್ಯೋತ್ ಸಿಂಗ್ (37) ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಏಕಾಏಕಿ ಗಾಳಿ, ಭೀಕರ ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ಮಳೆ ಆರಂಭವಾಗಿತ್ತು. ಈ ಸಂದರ್ಭ ಅರಾಟೆ ಹಳೆ ಸೇತುವೆಯ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ವೀಕ್ಷಣೆಗಾಗಿ ಅಶಿತೋಷ್ ಹಾಗೂ ನವಜ್ಯೋತ್ ಸಿಂಗ್ ಅವರು ಸೇತುವೆಯ ಮೇಲಿದ್ದರು. ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಅನಿರೀಕ್ಷಿತವಾಗಿ ಅಪ್ಪಳಿಸಿದ ಪ್ರಬಲ ಸಿಡಿಲು ಅಶಿತೋಷ್ ಅವರ ಮೇಲೆ ಬಡಿದಿದೆ ಎಂದು ತಿಳಿದು ಬಂದಿದೆ. ಸಿಡಿಲಿನ ತೀವ್ರತೆಗೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

