

ಕುಂದಾಪುರ,ಜೂ. 26: ಇಲ್ಲಿನ ಸೈಂಟ್ ಮೇರಿಸ್ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿ ಸರಕಾರದ ಚುನಾವಣೆ ಜೂ. 26 ರಂದು ನಡೆದಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಮತದಾನದ ಅನುಭವ ಪಡೆದುಕೊಂಡರು.
ವಿದ್ಯಾರ್ಥಿ ಸರಕಾರದ ಚುನಾವಣೆಯಲ್ಲಿ ಚುನಾವಣಾಧಿಕಾರಿ, ಮತಗಟ್ಟೆಯ ಅಧಿಕಾರಿಗಳ ಜತೆಗೆ ವಿದ್ಯಾರ್ಥಿಗಳೇ ಪೋಲಿಸರ ಹಾಗೇ ಬಂದೋಬಸ್ತ್ ವ್ಯವಸ್ಥೆ ಮಾಡಿ ಮಾತನಾನ ನಡೆಸಿರುವುದು ವಿಶೇಷತೆವಾಗಿದೆ.
ನಾಮಪತ್ರ ಸಲ್ಲಿಕೆ, ಪರಿಶೀಲತೆ, ಹಿಂತೆಗೆತದ ಬಳಿಕ ವಿದ್ಯಾರ್ಥಿ ನಾಯಕರ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಬ್ಯಾಟ್, ಬಾಲ್, ಉಪನಾಯಕನ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸೈಕಲ್, ಟಿವಿ, ರಿಕ್ಷಾ ಚಿಹ್ನೆ ನೀಡಿಲಾಯಿತು. ಚುನಾವಣೆ ಆರಂಭಗೊಂಡ ಬಳಿಕ ರೋಲ್ ನಂಬರ್ ಪ್ರಕಾರ ಮತದಾನ ಮಾಡಿದ ವಿದ್ಯಾರ್ಥಿಗಳಿಗೆ ಎಡಗೈ ತೋರು ಬೆರಳಿಗೆ ಶಾಯಿಯಿಂದ ಗುರುತು ಹಾಕಿಸಿಕೊಂಡು ಗೌಪ್ಯವಾಗಿ ಬೇಕಾದ ಅಭ್ಯರ್ಥಿಗಳಿಗೆ ಮತ ಹಾಕುವ ಅವಕಾಶ ನೀಡಲಾಗಿತ್ತು. ಮತದಾನ ಮುಗಿದ ತಕ್ಷಣ ಎಲ್ಲಾ ವಿದ್ಯಾರ್ಥಿಗಳ ಎದುರು ಮತ ಎಣಿಕೆ ಮಾಡಲಾಗಿದ್ದು, ವಿದ್ಯಾರ್ಥಿ ನಾಯಕಿಯಾಗಿ 10ನೇ ತರಗತಿಯ ದೃಶ್ಯ, ಉಪನಾಯಕನಾಗಿ 9ನೇ ತರಗತಿಯ ಚರಣ್ ಆಯ್ಕೆಗೊಂಡರು.ವಿರೋಧ ಪಕ್ಷದ ನಾಯಕರಾಗಿ ಸಾನ್ವಿ, ಉಪನಾಯಕರಾಗಿ ವೈಷ್ಣವಿ ಮತ್ತು ಸುಧ್ವನ್ ಆಯ್ಕೆಗೊಂಡರು. ವಿಜೇತರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ, ಸಹಾಯಕ ಚುನಾವಣಾ ಅಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯನಿರ್ವಹಿಸಿದರು. ಮತಗಟ್ಟೆಯ ಅಧಿಕಾರಿಗಳಾಗಿ ಶಿಕ್ಷಕಿಯರಾದ ಸಿಸ್ಟರ್ ಚೇತನಾ, ಪ್ರೀತಿ ಪಾೈಸ್, ಸ್ಮಿತಾ ಡಿ ಸೋಜಾ, ಸುಶೀಲಾ ಖಾರ್ವಿ, ಡೀನಾ ಪಾೈಸ್, ಕಛೇರಿ ಸಹಾಯಕಿ ಪ್ರೇಮಿ ಬಾಯಿ ಸಹಕರಿಸಿದರು.








