

ಕುಂದಾಪುರ; ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 07-11-2026ರ ಶನಿವಾರದಂದು ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮವು ದೇವರ ಆಶೀರ್ವಾದದೊಂದಿಗೆ ಪ್ರಾರ್ಥನಾ ಗೀತೆಯ ಮೂಲಕ ಆರಂಭವಾಯಿತು. ನಂತರ ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಪೂಜ್ಯನೀಯ ಧರ್ಮಗುರು ರೋಲ್ವಿನ್ ಫೆರ್ನಾಂಡಿಸ್ ಅವರು ಶಾಲೆಯ ಬಸ್ ಚಾಲಕರಾದ, ಮಹಾಲಿಂಗ ಪೂಜಾರಿ, ರಂಗಪ್ಪಯ್ಯ ಶೇಟ್, ನವೀನ ಖಾರ್ವಿ ಇವರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯನೀಯ ಫಾ. ರೋಲ್ವಿನ್ ಫೆರ್ನಾಂಡಿಸ್ ಅವರು, ದೀಪಾವಳಿ ಎಂದರೆ ಬೆಳಕಿನ ಹಬ್ಬ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಂದರೆ ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯ ಹಾಗೂ ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾರುತ್ತದೆ ಎಂದು ತಿಳಿಸಿದರು.ದೀಪಾವಳಿ ಹಬ್ಬವು ನರಕಾಸುರನ ಸಂಹಾರದ ನೆನಪನ್ನೂ ಸಾರುತ್ತದೆ. ಪುರಾಣಗಳ ಪ್ರಕಾರ, ನರಕಾಸುರನು ತನ್ನ ಕ್ರೂರತೆ ಮತ್ತು ಅಹಂಕಾರದಿಂದ ಜನರಿಗೆ ಬಹಳಷ್ಟು ತೊಂದರೆ ನೀಡುತ್ತಿದ್ದನು. ಲೋಕಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ಮರಳಿ ತರಲು ಶ್ರೀರಾಮನು ನರಕಾಸುರನನ್ನು ಸಂಹರಿಸಿದನು. ನರಕಾಸುರನ ಸಂಹಾರವು ದುಷ್ಟಶಕ್ತಿಯ ಮೇಲೆ ದೈವಿಕ ಶಕ್ತಿಯ ವಿಜಯವನ್ನು ಸಂಕೇತಿಸುತ್ತದೆ. ನರಕಾಸುರನ ವಧೆಯ ನಂತರ ಜನರು ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಅಂದಿನಿಂದ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸುವ ಸಂಪ್ರದಾಯ ಬೆಳೆದುಬಂದಿದೆ. ಈ ಹಬ್ಬವು ಪ್ರತಿಯೊಬ್ಬರೂ ತಮ್ಮಲ್ಲಿರುವ ಅಹಂಕಾರ, ದ್ವೇಷ ಮತ್ತು ಕೆಟ್ಟ ಆಲೋಚನೆಗಳನ್ನು ತೊರೆದು ಪ್ರೀತಿ, ಕರುಣೆ ಹಾಗೂ ಒಳ್ಳೆಯತನದ ಬೆಳಕಿನ ಹಾದಿಯಲ್ಲಿ ನಡೆಯಬೇಕೆಂಬ ಸಂದೇಶವನ್ನು ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯಗಳು ಹಾಗೂ ಮನರಂಜನಾ ಪ್ರದರ್ಶನಗಳು ನಡೆದವು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇಡೀ ಕಾರ್ಯಕ್ರಮವು ಹಬ್ಬದ ಸಂಭ್ರಮ ಮತ್ತು ಸಡಗರದಿಂದ ಕೂಡಿತ್ತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಸಮಾರಂಭವು ಯಶಸ್ವಿಯಾಗಿ ಮುಕ್ತಾಯಗೊಂಡಿತು.













