

ಶ್ರೀನಿವಾಸಪುರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಿದ ಮೇಲೆ ಬಿಎಂಐಸಿ ಹೆದ್ದಾರಿ ಅಪ್ರಸ್ತುತವಾಗಿದೆ ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ನುಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗ ಶುಕ್ರವಾರ ತಾಲೂಕು ಕೆಪಿಆರ್ಎಸ್ವತಿಯಿಂದ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಪವಿತ್ರ ಮೂಲಕ ಮುಖ್ಯ ಮಂತ್ರಿಗಳಿಗೆ ತಮ್ಮ ಬೇಡಿಕೆಗಳನ್ನು ನಿವಾರಿಸುವ ಸಲುವಾಗಿ ಮನವಿ ಪತ್ರವನ್ನು ರವಾನಿಸುವಂತೆ ಸಲ್ಲಿಸಿದರು.
ನೂರಾರು ಜನರು ಕೋರ್ಟ್ಗಳಿಗೆ ಅಲೆದಾಡಿ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಬಲಿಷ್ಠ ರಾಜಕೀಯ-ಉನ್ನತ ಅಧಿಕಾರಿಗಳ ಭ್ರಷ್ಟ ಬೆಂಬಲ, ಕೆಐಎಡಿಬಿ-ಪಿಡಬ್ಲುಡಿ ಮುಂತಾದ ಇಲಾಖೆಗಳನ್ನು ತನ್ನ ದಾಳವಾಗಿ ಬಳಸಿ ಮಾಡಿಕೊಂಡ ಅಕ್ರಮ-ಕಾನೂನು ಬಾಹಿರ ಕ್ರಮಗಳು ಮತ್ತು ಅರೆ ಸತ್ಯ ಹಾಗೂ ತಿರುಚಿದ ವಾಸ್ತವಗಳನ್ನು ಬಿಡಿ ಬಿಡಿಯಾಗಿ ಒದಗಿಸಿ ಅಪಮಾರ್ಗಗಳ ಮೂಲಕ ಪಡೆದುಕೊಂಡ ನ್ಯಾಯಲಯದ ತೀರ್ಪುಗಳು ಹೀಗೆ ಇವುಗಳ ಜಂಟಿ ಅಡಕತ್ತರಿಯಲ್ಲಿ ಸಿಕ್ಕಿ ಈ ಭಾಗದ ರೈತರು ನರಕ ರೂಪದ ನೋವನ್ನು ಅನುಭವಿಸುತ್ತಿದ್ದಾರೆ. ಸ್ಥಳೀಯ ರೈತರ ಮೇಲೆ ಗೂಂಡಾಗಳನ್ನು ಬಿಟ್ಟು ಬೆದರಿಸಲಾಗುತ್ತಿದೆ ಎಂದರು.
ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನ ಒದಗಿಸಬೇಕು . ನೈಸ್ ಕಂಪನಿಗೆ ಗುತ್ತಿಗೆಗೆ ನೀಡಿರುವ ಎಲ್ಲಾ ಸರ್ಕಾರಿ ಭೂಮಿಗಳನ್ನು ವಾಪಸ್ಸು ಪಡೆದು, ಮನೆ. ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡಿರುವ ಎಲ್ಲಾ ವಸತಿ ರಹಿತರಿಗೆ ಮನೆ ಒದಗಿಸಬೇಕು.ಹಕ್ಕೋತ್ತಾಯ ಸಲ್ಲಿಸಿ, ರಾಜ್ಯ ಸರ್ಕಾರದ ಸಂಪುಟ ಉಪಸಮಿತಿ ನೇಮಕ ಹಿನ್ನೆಲೆಯಲ್ಲಿ ಬಿಎಂಐಸಿ ನೈಸ್ ಕಂಪನಿಗೆ ಯಾವುದೇ ರಸ್ತೆ ನಿರ್ಮಾಣ ಕಾಮಗಾರಿ ನಡೆಸದಂತೆ ನಿಬರ್ಂಧ ವಿಧಿಸಲು ಹಾಗೂ ಅಕ್ರಮ-ಕಾನೂನು ಬಾಹಿರ ರಸ್ತೆ ಕಾಮಗಾರಿ ವಿರುದ್ಧ ಪ್ರತಿಭಟಿಸುವ ರೈತರಿಗೆ ಹಾಗೂ ರೈತ ಮುಖಂಡರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್ಎಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮಾತನಾಡಿದರು. ತಾಲೂಕು ಗೌರವಾಧ್ಯಕ್ಷ ಎನ್.ವೀರಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಿ.ಎ.ಸೈಯದ್ಫಾರೂಕ್ , ಪದಾಧಿಕಾರಿಗಳಾದ ಆರ್.ವೆಂಕಟೇಶ್, ಎಂ.ಎಸ್.ನಾಗರಾಜ್, ಜಿ.ಮಂಜುಳ, ಕೃಷ್ಣಪ್ಪ, ಟಿ.ಎಚ್.ಆಂಜಲಪ್ಪ, ಎಸ್.ಶಿವಾರೆಡ್ಡಿ, ಪ್ರದೀಪ್, ಎಂ.ರಾಮಪ್ಪ, ಶಿವರಾಜ್ಕುಮಾರ್, ಪಾಮಲದಿನ್ನಿ ಮುನಿರಾಜು, ಜಿ.ಎಸ್.ಮಮತಾ ಇದ್ದರು.

