

ಚಿತ್ತೂರು ಗ್ರಾಮದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಭೀಮಾಶಂಕರ ಸರ್ ಅವರ ಮೆಚ್ಚುಗೆ!
ಚಿತ್ತೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆಗೆ ಸೂಕ್ತ ವೇದಿಕೆ ದೊರೆತರೆ, ಅವರು ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡಬಲ್ಲರು ಎಂಬುದಕ್ಕೆ ಚಿತ್ತೂರು ಗ್ರಾಮದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳ ಈ ವಿಶೇಷ ಚಟುವಟಿಕೆ ಉತ್ತಮ ಉದಾಹರಣೆಯಾಗಿದೆ.
ಶಾಲೆಯ ಆಂಗ್ಲ ಭಾಷಾ ಪಠ್ಯದಲ್ಲಿರುವ ‘Be Smart, Be Safe’ ಪಾಠವನ್ನು ಆಧರಿಸಿಕೊಂಡು, ಮಕ್ಕಳಿಗೆ ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆಯ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯ ಆಂಗ್ಲ ಭಾಷಾ ಶಿಕ್ಷಕ ಶ್ರೀ ಗುರುಪ್ರಸಾದ್ ಅವರು ಸೃಜನಶೀಲ ಚಟುವಟಿಕೆಯನ್ನು ರೂಪಿಸಿದರು.
ತರಗತಿಯಲ್ಲಿ ಪಠ್ಯವನ್ನು ಕೇವಲ ಓದಿ ಅರ್ಥೈಸುವುದಕ್ಕಿಂತ, ಅದನ್ನು ನೈಜ ಜೀವನಕ್ಕೆ ಅನ್ವಯಿಸುವಂತೆ ಮಕ್ಕಳನ್ನು ಪ್ರೇರೇಪಿಸಿದ ಶಿಕ್ಷಕರ ಮಾರ್ಗದರ್ಶನದಲ್ಲಿ, 4ನೇ ತರಗತಿಯ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಪತ್ರಗಳನ್ನು ಬರೆದರು.
ತಮ್ಮ ಪತ್ರಗಳಲ್ಲಿ ಪೊಲೀಸರು ಹಗಲು-ರಾತ್ರಿ ಸಾರ್ವಜನಿಕರ ಸುರಕ್ಷತೆಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿ, ಅವರ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಹಾಗೂ ಸಾರ್ವಜನಿಕರಲ್ಲಿ ಸಂಚಾರ ಶಿಸ್ತು ಮೂಡಿಸುವಲ್ಲಿ ಪೊಲೀಸರು ವಹಿಸುತ್ತಿರುವ ಪಾತ್ರವನ್ನು ಮಕ್ಕಳು ತಮ್ಮದೇ ಸರಳ ಭಾಷೆಯಲ್ಲಿ ವ್ಯಕ್ತಪಡಿಸಿದರು.
ಗ್ರಾಮೀಣ ಸರ್ಕಾರಿ ಶಾಲೆಯ ಪುಟ್ಟ ಮಕ್ಕಳಿಂದ ಬಂದ ಈ ಆತ್ಮೀಯ ಪತ್ರಗಳು ಕೊಲ್ಲೂರು ಪೊಲೀಸ್ ಠಾಣೆಯ ಸಿಬ್ಬಂದಿಯ ಗಮನ ಸೆಳೆದವು. ವಿದ್ಯಾರ್ಥಿಗಳ ಪತ್ರವನ್ನು ಸ್ವೀಕರಿಸಿದ ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಭೀಮಾಶಂಕರ ಅವರು ಮಕ್ಕಳ ಪ್ರಯತ್ನವನ್ನು ಮೆಚ್ಚಿ, ಪ್ರತ್ಯೇಕವಾಗಿ ಕೃತಜ್ಞತಾ ಹಾಗೂ ಪ್ರಶಂಸಾ ಪತ್ರ ಬರೆದು ಕಳುಹಿಸಿದ್ದಾರೆ.
ಪತ್ರದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸಂಚಾರ ನಿಯಮಗಳ ಮಹತ್ವವನ್ನು ತಿಳಿಸುವ ಮಕ್ಕಳ ಪ್ರಯತ್ನ ಶ್ಲಾಘನೀಯ ಎಂದು ಅವರು ತಿಳಿಸಿದ್ದು, ಫುಟ್ಪಾತ್ ಬಳಕೆ, ಜೀಬ್ರಾ ಕ್ರಾಸಿಂಗ್, ಹೆಲ್ಮೆಟ್ ಧಾರಣೆ ಹಾಗೂ ಸಂಚಾರ ಸಂಕೇತಗಳ ಪಾಲನೆ ಸೇರಿದಂತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಕ್ಕಳಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, ತಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವಂತೆ ಪ್ರೋತ್ಸಾಹಿಸಿದ್ದಾರೆ.
ಮಕ್ಕಳಿಗಾಗಿ ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿರುವ ಅವರು, ಮುಂದೆಯೂ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಪಠ್ಯಪುಸ್ತಕದ ಒಂದು ಪಾಠದಿಂದ ಆರಂಭವಾದ ಚಟುವಟಿಕೆ, ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಕೃತಜ್ಞತಾ ಮನೋಭಾವ ಬೆಳೆಸುವುದರ ಜೊತೆಗೆ, ಪೊಲೀಸ್ ಇಲಾಖೆ ಹಾಗೂ ಶಾಲೆಯ ನಡುವಿನ ಆತ್ಮೀಯ ಬಾಂಧವ್ಯಕ್ಕೂ ಕಾರಣವಾಗಿದೆ.
ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳ ಈ ವಿಶಿಷ್ಟ ಪ್ರಯತ್ನಕ್ಕೆ ಹಾಗೂ ಅದನ್ನು ಸಾಧ್ಯವಾಗಿಸಿದ ಶಿಕ್ಷಕ ಶ್ರೀ ಗುರುಪ್ರಸಾದ್ ಅವರ ಸೃಜನಶೀಲ ಬೋಧನಾ ವಿಧಾನಕ್ಕೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


