


ಕೋಲಾರ:- ಮಕ್ಕಳೇ ತಂದೆ ತಾಯಿಯನ್ನು ನೋಯಿಸಿದರೆ ನಿಮಗೆ ಒಳ್ಳೆಯದು ಆಗಲ್ಲ. ಅವರ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಿ. ಪೋಷಕರೂ ಅಷ್ಟೇ ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿಸಿ ಎಂದು ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ ಕರೆ ನೀಡಿದರು.
ನಗರ ಹೊರವಲಯದ ಕೃಷ್ಣಾ ಕಲ್ಯಾಣ ಮಂಟಪದಲ್ಲಿ ಬುಧವಾರ ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯಿಂದ ನಡೆದ ಹೊಸ ಹೆಜ್ಜೆ ಕನಸಿನಿಂದ ಸಾಧನೆಯತ್ತ ಮೊದಲ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಧಕರನ್ನು ಮಾದರಿಯಾಗಿ ತೆಗೆದುಕೊಂಡರೆ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬಹುದು. ಸರ್.ಎಂ.ವಿ. ಬೀದಿ ದೀಪದಲ್ಲಿ, ಅಬ್ದುಲ್ ಕಲಾಂ ಪೇಪರ್ ಹಾಕಿ ಓದಿದವರು. ಅಂತಹವರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಪಿಯು ಹಾಗೂ ಪದವಿ ಪ್ರಥಮ ವರ್ಷದಲ್ಲಿ ಮಕ್ಕಳನ್ನು ಕಾಪಾಡಿಕೊಂಡರೆ ಎಂದಿಗೂ ತಪ್ಪುದಾರಿ ಹಿಡಿಯುವುದಿಲ್ಲ. ಪೋಷಕರ ನಿಯಂತ್ರಣದಲ್ಲೇ ಇರುತ್ತಾರೆ. ಆದ್ದರಿಂದ 3 ವರ್ಷಗಳ ಕಾಲ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಸಿ.ಬೈರೇಗೌಡರು ರೈತರು, ಹೆಣ್ಣು ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಸಿಗಬೇಕೆನ್ನುವ ದೂರದೃಷ್ಟಿ ಹೊಂದಿದ್ದು, ಅದರಂತೆಯೇ ನಾವು ಸ್ಥಾಪಿಸಿದ್ದೇವೆ. ಅಲ್ಲದೆ ನರಸಾಪುರ, ವೇಮಗಲ್ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಲು ಕೃಷ್ಣ ಬೈರೇಗೌಡ ಕಾರಣರಾಗಿದ್ದು, ಅವರ ತಂದೆಯ ಆಸೆಯಂತೆ ಈ ಭಾಗದ ಯುವಕರಿಗೆ ಉದ್ಯೋಗ ಲಭಿಸುತ್ತಿವೆ. ಇದು ನಮ್ಮ ಕಾಲೇಜಿನ 18ನೇ ಬ್ಯಾಚ್ ಆಗಿದ್ದು, ಈ ವರ್ಷ 182 ಕಡೆ ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಸಿಕ್ಕಿದೆ ಹೀಗಾಗಿ ಉತ್ತಮ ಭವಿಷ್ಯ ಮಕ್ಕಳಿಗೆ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ಎ.ಪ್ರಭಾಕರ ರೆಡ್ಡಿ, ಯಾವುದೇ ಕಂಪನಿಯ ಸಂದರ್ಶನದಲ್ಲಿ ಯಾವ ರೀತಿ ವರ್ತನೆ ಮಾಡುವಿರೋ ಅದರ ಮೇಲೆ ಅವಕಾಶ ಸಿಗುತ್ತದೆ. ಮಾತನಾಡಲು ವೇದಿಕೆ, ಮೈಕ್ ಸಿಕ್ಕಾಗ ಅಂತಹ ಅವಕಾಶವನ್ನು ಎಂದಿಗೂ ಬಿಡಬೇಡಿ ಎಂದು ಸಲಹೆ ನೀಡಿದರು.
ಬೆಂಗಳೂರು ಸಾಫ್ಟ್ವೇರ್ನ ರಾಜಧಾನಿಯಾಗಿದೆ. ನಿಮಗೆ ಸುಮ್ಮನೆ ಯಾವ ಕಂಪನಿಯೂ 1 ಲಕ್ಷ ಕೊಟ್ಟು ಕೆಲಸಕ್ಕೆ ಸೇರಿಸಿಕೊಳ್ಳಲ್ಲ. ನಿಮ್ಮ ಟ್ಯಾಲೆಂಟ್ ನೋಡುತ್ತಾರೆ. ಕಾಟಾಚಾರಕ್ಕೆ ಎಂದರೆ ಇಂಜಿನಿಯರಿಂಗ್ ಓದಲೇ ಬೇಡಿ. ಸಾಧಕರಾಗಬೇಕೆನ್ನುವವರು ಮಾತ್ರ ಓದಿ ಎಂದ ಅವರು, ಸಂಸ್ಥೆಯಿಂದ ಸ್ಕಾಲರ್ ಶಿಪ್ ನೀಡುತ್ತೇವೆ ಅದಕ್ಕೆ ನೀವು ಏನು ಮಾಡಬೇಕು ಅದನ್ನು ಸಮರ್ಪಕವಾಗಿ ಮಾಡಿ ಎಂದು ಕರೆ ನೀಡಿದರು
ಪ್ರಾಂಶುಪಾಲ ಡಾ.ಆರ್.ಶಿವರಾಜು ಸ್ವಾಗತಿಸಿ ಮಾತನಾಡಿ, ಕಾಲೇಜು ಉತ್ತಮ ವಾತಾವರಣದಲ್ಲಿ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದ್ದು ಆರಂಭದಿಂದಲೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಸೂಕ್ತ ಸಂಸ್ಥೆಯಾಗಿದೆ ಎಂದರು.
ಇದೇ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರೋಬೋ ಎಲ್ಲರ ಗಮನ ಸೆಳೆಯಿತು.
ವೇದಿಕೆಯಲ್ಲಿ ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯ ಖಜಾಂಚಿ ಎನ್.ಮಂಜುಳಾ, ಪ್ರಕೃತಿ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಯಶ್ವಂತ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್, ಉಪನ್ಯಾಸಕರು, ವಿದ್ಯಾರ್ಥಿಗಳು, ಪೆÇೀಷಕರು ಉಪಸ್ಥಿತರಿದ್ದರು.

