


ಕೋಲಾರ:- ಕೋಲಾರ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳ ಪ್ರಗತಿ ಹಾಗೂ ಸ್ಥಳೀಯ ಮೂಲ ಸೌಕರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಾಜಿ ವಿಧಾನಸಭಾ ಮಾಜಿ ಸ್ಪೀಕರ್ ಹಾಗೂ ಹಿರಿಯ ರಾಜಕಾರಣಿ ಕೆ.ಆರ್. ರಮೇಶ್ ಕುಮಾರ್ ಅವರು ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ವಿಸ್ತೃತ ಚರ್ಚೆ ನಡೆಸಿದರು.
ಬರಪೀಡಿತ ಕೋಲಾರ ಜಿಲ್ಲೆಯ ಬಹುದಿನಗಳ ಕನಸಾಗಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಕುರಿತು ರಮೇಶ್ ಕುಮಾರ್ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದರು.
ಕಾಮಗಾರಿಯ ಪ್ರಸ್ತುತ ಹಂತ ಹಾಗೂ ಬಾಕಿ ಉಳಿದಿರುವ ಪೈಪ್ಲೈನ್ ಅಳವಡಿಕೆ ಕಾರ್ಯಗಳನ್ನು ಪರಿಶೀಲಿಸಿ, ನಿಗಧಿತ ಕಾಲಮಿತಿಯೊಳಗೆ ಜಿಲ್ಲೆಗೆ ನೀರು ಪ್ರವೇಶಿಸಿ ಕಟ್ಟ ಕಡೆಯ ಕೆರೆಗಳಿಗೂ ನೀರು ಹರಿಯುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಮಹತ್ವಾಕಾಂಕ್ಷೆಯ ಕೆ.ಸಿ. ವ್ಯಾಲಿ (ಕೋರಮಂಗಲ-ಚಲಘಟ್ಟ ವ್ಯಾಲಿ) ಯೋಜನೆಯ ಎರಡನೇ ಮತ್ತು ಮೂರನೇ ಹಂತದ ಕಾಮಗಾರಿಗಳ ಕುರಿತು ಗಂಭೀರ ಚರ್ಚೆ ನಡೆಯಿತು.
ಯೋಜನೆ ವ್ಯಾಪ್ತಿಯಿಂದ ಹೊರಗುಳಿದಿರುವ ಕೆರೆಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ನೀರನ್ನು ಕನಿಷ್ಠ ಮೂರು ಹಂತಗಳಲ್ಲಿ ವೈಜ್ಞಾನಿಕವಾಗಿ ಶುದ್ಧೀಕರಿಸಿ ನಿಗದಿತ ಪ್ರಮಾಣದಷ್ಟು ನೀರು ಪೂರೈಕೆ ಮಾಡುವ ಮೂಲಕ ರೈತರ ಕೃಷಿ ಹಾಗೂ ಅಂತರ್ಜಲ ರಕ್ಷಣೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯ ಅಂತರ್ಜಲ ವೃದ್ದಿಗೆ ಕೆಸಿ ವ್ಯಾಲಿ ನೀರು ಪ್ರಮುಖ ಪಾತ್ರ ವಹಿಸಿದ್ದು, ಇದರ ಮೂರನೇ ಹಂತದ ಶುದ್ದೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ಜಿಲ್ಲೆಯ ಉಳಿದ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಕುರಿತು ಕ್ರಮವಹಿಸಲು ಈ ಸಂದರ್ಭದಲ್ಲಿ ರಮೇಶ್ಕುಮಾರ್ ಮನವಿ ಮಾಡಿದರು.
ಜಿಲ್ಲೆಯಲ್ಲಿ ಪರಿಸರ ಸಮತೋಲನ ಕಾಪಾಡುವುದು, ಹೆದ್ದಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಮರಗಳ ಸೂಕ್ತ ನಿರ್ವಹಣೆ, ಹಸಿರೀಕರಣ ವೃದ್ಧಿ ಮತ್ತು ನೈಸರ್ಗಿಕ ಜಲಮೂಲಗಳ ಸಂರಕ್ಷಣೆಗೆ ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಅವರು ಬೇಡಿಕೆ ಮಂಡಿಸಿದರು.
ಬರ ಆವರಿಸುವ ಆತಂಕದ ಹಿನ್ನಲೆಯಲ್ಲಿ ಕೋಲಾರಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ವಹಿಸಲು ಕೋರಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಬಿತ್ತನೆ ಇಲ್ಲವಾಗಿದೆ, ಕೆಲವು ಕಡೆಗಳಲ್ಲಿ ಮಾಡಿದ ಬಿತ್ತನೆಯೂ ಒಣಗುತ್ತಿದೆ, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.
ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಭರವಸೆ ನೀಡಿದರು. ಎತ್ತಿನಹೊಳೆ ಕಾಮಗಾರಿಯ ಅಡೆತಡೆಗಳನ್ನು ಶೀಘ್ರವೇ ನಿವಾರಿಸಿ, ಅಧಿಕಾರಿಗಳೊಂದಿಗೆ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕಾಮಗಾರಿಗಳಿಗೆ ವೇಗ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೆÇನ್ನಣ್ಣ ಹಾಗೂ ಕೋಲಾರ ಭಾಗದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.


