

ಕೋಲಾರ,ಜೂ.19: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವೃತ್ತಿನಿರತ ಸದಸ್ಯರು ಆಕಸ್ಮಿಕವಾಗಿ ನಿಧನ ಹೊಂದಿದರೆ, ಅವರ ಕುಟುಂಬಕ್ಕೆ ಈವರೆಗೂ ನೀಡಲಾಗುತ್ತಿದ್ದ ತಕ್ಷಣದ ನೆರವಿನ ಮೊತ್ತವನ್ನು 20 ಸಾವಿರ ರೂಗಳಿಂದ 25 ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ.
ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ಕುಮಾರ್ ತಿಳಿಸಿದ್ದಾರೆ.
ಪತ್ರಕರ್ತರ ತಂದೆ, ತಾಯಿ, ಪತಿ ಅಥವಾ ಪತ್ನಿ ನಿಧನರಾದ ಸಮಯದಲ್ಲಿ ನೀಡುತ್ತಿದ್ದ ನೆರವಿನ ಮೊತ್ತವನ್ನು 5 ರಿಂದ 10 ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ. ಈ ನೆರವನ್ನು ಪತ್ರಕರ್ತರ ಮಕ್ಕಳು ಮೃತರಾದ ಸಂದರ್ಭದಲ್ಲೂ ದೊರಕಿಸುವ ಯೋಜನೆಯನ್ನು ವಿಸ್ತರಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಪತ್ರಕರ್ತರ ಭವನದ ಸಿಬ್ಬಂದಿಯ ವೇತನ ಹಾಗೂ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಸದಸ್ಯರಿಗೆ ಗೌರವಧನ ಮೊತ್ತವನ್ನು 300 ರೂಗಳಿಂದ 500 ರೂಗಳಿಗೆ ಹೆಚ್ಚಿಸಲು ಸಭೆಯು ಒಪ್ಪಿಗೆ ನೀಡಿದೆ.
ಅರ್ಥಪೂರ್ಣ ಪತ್ರಿಕಾ ದಿನಾಚರಣೆಗೆ ನಿರ್ಧಾರ:
ಜುಲೈ 1 ರಂದು ಪತ್ರಕರ್ತರ ಭವನದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯನ್ನು ಪ್ರತಿ ವರ್ಷದಂತೆ ಈ ವರ್ಷವು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ನಡೆಸಲು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ಇದುವರೆಗೂ 9 ಮಂದಿ ಹಿರಿಯ ಪತ್ರಕರ್ತರ ಹೆಸರಿನಲ್ಲಿ ನೀಡುತ್ತಿದ್ದ ಪ್ರಶಸ್ತಿಯ ಸಾಲಿಗೆ ಈ ವರ್ಷದಿಂದ ಕೋಲಾರಪತ್ರಿಕೆ ಸಂಪಾದಕ ಕೆ.ಪ್ರಹ್ಲಾದರಾವ್ ಅವರ ಹೆಸರಿನ ಪ್ರಶಸ್ತಿಯನ್ನು ಆರಂಭಿಸಲು ನಿರ್ಧರಿಸಲಾಯಿತು.
ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು.
ಸಭೆಯಲ್ಲಿ ಪತ್ರಕರ್ತರ ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವ ಹೊಳ್ಳ, ರಾಜ್ಯ ಸಮಿತಿ ಸದಸ್ಯರಾದ ಕೆ.ಎಸ್. ಗಣೇಶ್ ಮತ್ತು ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಸುರೇಶ್ ಕುಮಾರ್, ಉಪಾಧ್ಯಕ್ಷರುಗಳಾದ ಟೇಕಲ್ ಲಕ್ಷ್ಮೀಶ, ಎ.ಅಪ್ಪಾಜಿಗೌಡ, ಕಾರ್ಯದರ್ಶಿಗಳಾದ ಎಸ್.ಪಿ.ವೆಂಕಟೇಶ್, ಎಂ.ರವಿಕುಮರ್, ಸದಸ್ಯರುಗಳಾದ ಸಿ.ವಿ.ನಾಗರಾಜ್, ನಾ.ಮಂಜುನಾಥ್, ವೈ.ಶಿವಶಂಕರ್, ಎಲ್.ಮುರಳಿಮೋಹನ್, ಕೆ.ಆಸೀಫ್ ಪಾಷ, ಎಂ.ಲಕ್ಷ್ಮಣ, ವೆಂಕಟೇಶಪ್ಪ, ವಿ.ರಾಮಕೃಷ್ಣ, ಎನ್.ರಾಮು, ಬಿ.ಎಲ್. ರಾಜೇಂದ್ರಸಿಂಹ, ಹೆಚ್.ಎಲ್.ನಾಗರಾಜ್, ಮಂಜುನಾಥಗೌಡ, ರಾಜೇಂದ್ರವೈದ್ಯ, ಪುರುಷೋತ್ತಮರೆಡ್ಡಿ, ಎಂ.ನಾಗರಾಜಯ್ಯ, ಮಹಮದ್ ಯೂನುಸ್ ಭಾಗವಹಿಸಿದ್ದರು

