


ಕೋಲಾರ, ಜು.2: ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಪ್ರಮುಖ ಸೇತುವೆಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಹೇಳಿದರು.
ಭಾರತ ಸರ್ಕಾರದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ), ಬೆಂಗಳೂರು, ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದ್ದು, ಅದರೊಂದಿಗೆ ಸುಳ್ಳು ಸುದ್ದಿಗಳ ಪ್ರಸಾರವೂ ವೇಗ ಪಡೆದಿದೆ. ಯಾವುದೇ ಸುದ್ದಿಯನ್ನು ಪರಿಶೀಲಿಸಿ ನಿಖರ ಮಾಹಿತಿಯನ್ನೇ ಜನರಿಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತವು ಪಾರದರ್ಶಕ ಹಾಗೂ ಉತ್ತರದಾಯಿತ್ವದ ಆಡಳಿತಕ್ಕೆ ಬದ್ಧವಾಗಿದ್ದು, ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ ಎಂದರು.
ಪಿಐಬಿ ಸಹಾಯಕ ನಿರ್ದೇಶಕ ಮಧು ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಯೋಜನೆಗಳ ಸಮಗ್ರ ಮಾಹಿತಿ ಪಡೆದು ಅದನ್ನು ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವುದೇ ಕಾರ್ಯಾಗಾರದ ಉದ್ದೇಶ ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಮಾತನಾಡಿ, ಸರ್ಕಾರಗಳು ಜಾರಿಗೊಳಿಸುವ ಜನಪರ ಯೋಜನೆಗಳು ಮಾಧ್ಯಮಗಳ ಮೂಲಕವೇ ಗ್ರಾಮೀಣ ಭಾಗದ ಜನರಿಗೆ ತಲುಪುತ್ತವೆ. ಅಧಿಕಾರಿಗಳು ಮತ್ತು ಪತ್ರಕರ್ತರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಯೋಜನೆಗಳ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದರು.
ಕೋಲಾರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್. ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಪಿಐಬಿ ಈ ರೀತಿಯ ವಾರ್ತಾಲಾಪ ಕಾರ್ಯಾಗಾರ ಆಯೋಜಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪತ್ರಕರ್ತರಿಗೆ ಪ್ರತಿನಿತ್ಯ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಇ-ಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಎಂ.ಎನ್. ಮಂಜುಳಾ ರೈತರಿಗಾಗಿ ಕೇಂದ್ರ ಸರ್ಕಾರದ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿ ಮುನಿರಾಜು ಮಹಿಳಾ ಸಬಲೀಕರಣ ಯೋಜನೆಗಳು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ಶಿವಕುಮಾರ್ ಅಟಲ್ ಪಿಂಚಣಿ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಹಾಗೂ ಸುಕನ್ಯಾ ಸಮೃದ್ಧಿ ಸೇರಿದಂತೆ ಹಣಕಾಸು ಸೇರ್ಪಡೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಯುವ ಅಧಿಕಾರಿ ಎ. ಮಹೇಂದ್ರ ರೆಡ್ಡಿ ಯುವಜನರಿಗೆ ಕೇಂದ್ರ ಸರ್ಕಾರದ ಮೈ ಭಾರತ್ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಮಾಜಿ ಅಧ್ಯಕ್ಷ ಬಿ. ವಿ ಗೋಪಿನಾಥ್, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮೈಲಾರಪ್ಪ, ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ರಮೇಶ್, ಹಿರಿಯ ಪತ್ರಕರ್ತ ಓಂಕಾರ್ ಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.


