

ನವದೆಹಲಿ/ಶ್ರೀನಿವಾಸಪುರ : ಮುಂದಿನ ವಿಧಾನಸಭಾ ಚುನಾವಣೆಯ ಸನ್ನಾಹದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಂಘಟನಾ ಬಲವರ್ಧನೆ ಹಾಗೂ ಚುನಾವಣಾ ತಂತ್ರ ರೂಪಿಸುವ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕ್ರಮದಂತೆ ಕೇರಳ ರಾಜ್ಯ ಕಾಂಗ್ರೆಸ್ ವಾರ ರೂಂ ಅಧ್ಯಕ್ಷರಾಗಿ ಶ್ರೀನಿವಾಸಪುರದ ಹರ್ಷ ಕನಡಂ ಅವರನ್ನು ನೇಮಿಸಲಾಗಿದೆ. ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಪ್ರಕಟಣೆಯ ಪ್ರಕಾರ, ಪಕ್ಷದ ಅಧ್ಯಕ್ಷರ ಅನುಮೋದನೆಯೊಂದಿಗೆ ಈ ನೇಮಕಾತಿ ತಕ್ಷಣದಿಂದಲೇ ಜಾರಿಯಾಗಲಿದೆ.
ಹರ್ಷ ಕನಡಂ ಅವರು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರ ಪುತ್ರರಾಗಿದ್ದಾರೆ. ಸಕ್ರಿಯ ಯುವ ನಾಯಕನಾಗಿ ಅವರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಚುನಾವಣಾ ತಂತ್ರ ರೂಪಿಸುವಲ್ಲಿ ಹಾಗೂ ಆಂತರಿಕ ಸಂಘಟನಾ ಕಾರ್ಯಗಳಲ್ಲಿ ನಿಪುಣತೆ ಪಡೆದಿದ್ದಾರೆ. ಕೇರಳದಂತಹ ಪ್ರಮುಖ ರಾಜ್ಯದಲ್ಲಿ ಚುನಾವಣಾ ತಂತ್ರ ರೂಪಿಸುವ ಮತ್ತು ಅದನ್ನು ಜಾರಿಗೆ ತರುವ ಜವಾಬ್ದಾರಿ ನೀಡಿರುವುದು ಪಕ್ಷದ ನಾಯಕತ್ವವು ಅವರ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಕ್ಟೋಬರ್ 7ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುಡುಚೇರಿ ರಾಜ್ಯಗಳ ವಾರ ರೂಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕಾತಿಯನ್ನು ಘೋಷಿಸಿದರು.
ವಾರ ರೂಂ ಘಟಕವು ಪಕ್ಷದ ಚುನಾವಣಾ ತಂತ್ರ ರೂಪಿಸುವುದು, ಪ್ರಚಾರ ಅಭಿಯಾನಗಳ ಯೋಜನೆ, ಸಾಮಾಜಿಕ ಮಾಧ್ಯಮ ತಂತ್ರ ಸಿದ್ಧತೆ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಸಂಪರ್ಕ ವ್ಯವಸ್ಥೆಗಳನ್ನು ಸಮನ್ವಯಗೊಳಿಸುವ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ.
ಪಕ್ಷ ವಲಯಗಳ ಪ್ರಕಾರ, ಹರ್ಷ ಕನಡಂ ಅವರ ನೇಮಕದಿಂದ ಕೇರಳ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ. ಯುವ ನಾಯಕತ್ವ ಮತ್ತು ಆಧುನಿಕ ತಂತ್ರಜ್ಞಾನದಲ್ಲಿನ ಅವರ ಪರಿಣಿತಿಯು ಪಕ್ಷಕ್ಕೆ ಬಲವಾದ ಸಂಘಟನಾ ಶಕ್ತಿಯನ್ನು ನೀಡಲಿದೆ ಎಂಬ ವಿಶ್ವಾಸ ಪಕ್ಷದ ನಾಯಕರದು.


