

ಶ್ರೀನಿವಾಸಪುರ : ತಾಲ್ಲೂಕಿನ ರೋಣೂರು ಸರ್ಕಾರಿ ಹೈಸ್ಕೂಲ್ನಲ್ಲಿ 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ. ಹಳೆಯ ವಿದ್ಯಾರ್ಥಿ ವೃಂದವು 25 ವರ್ಷಗಳ ಬಳಿಕ ಗುರು ವಂದನೆ ಮತ್ತು ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಹಾಗೂ ವೈಭವದಿಂದ ಆಯೋಜಿಸಿತು.
ಶಾಲೆಯ ಪರಂಪರೆ ಮತ್ತು ಶಿಕ್ಷಕರ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಯೋಜಿಸಿದ ಈ ಸ್ಮರಣೀಯ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಗುರುಗಳು ಒಂದೇ ವೇದಿಕೆಯಲ್ಲಿ ಸೇರಿದರು. ಈ ಸಂದರ್ಭವು ಎಲ್ಲರ ಮನಸ್ಸಿನಲ್ಲಿ ಹಳೆಯ ದಿನಗಳ ನೆನಪುಗಳನ್ನು ಮೂಡಿಸಿತು.
ಕಾರ್ಯಕ್ರಮದಲ್ಲಿ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮುಖ್ಯಶಿಕ್ಷಕ ಅಬ್ದುಲ್ ರಜಾಕ್, ಹಿರಿಯ ಶಿಕ್ಷಕರಾದ ಜಿ. ಗೋಪಾಲ್, ಎಸ್.ಎನ್. ವೆಂಕಟ ರೆಡ್ಡಿ, ಎಸ್.ಎನ್. ಅನಂತ ಪದ್ಮನಾಭ, ಜಿ. ರಾಮಚಂದ್ರಪ್ಪ, ಎ.ಎಸ್. ರಾಮಮೂರ್ತಿ ಸೇರಿದಂತೆ ಅನೇಕ ಗುರುಗಳನ್ನು ಭಾವಪೂರ್ಣವಾಗಿ ಸನ್ಮಾನಿಸಲಾಯಿತು. ಶಾಲೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗುಮಾಸ್ತ ವಾಜೀದ್ ಅವರಿಗೂ ವಿಶೇಷ ಸನ್ಮಾನ ಮಾಡಲಾಯಿತು.
ಹಳೆಯ ದಿನಗಳ ಸ್ಮರಣೆಯನ್ನು ಪುನರ್ಜೀವಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಪ್ರದರ್ಶನಗಳು ಗುರುಗಳ ಬೋಧನೆ, ಪ್ರೀತಿ ಮತ್ತು ಶಾಲೆಯ ಬಾಂಧವ್ಯವನ್ನು ನೆನಪಿಸಿತು.
ಕಾರ್ಯಕ್ರಮದ ನೇತೃತ್ವವನ್ನು ಹಳೆಯ ವಿದ್ಯಾರ್ಥಿಗಳಾದ ಶ್ರೀಕಾಂತ್, ವೇಣು, ರಾಜೇಶ್, ಶ್ರೀಮಂತ್ ಕೆ.ವಿ., ಮಧುಸೂದನ್ ಎನ್.ಎ., ಲಕ್ಷ್ಮೀ ಎಲ್.ಆರ್., ರೂಪಾ ಸಿ.ಎನ್. ಮತ್ತು ಸಹಪಾಠಿಗಳ ತಂಡ ವಹಿಸಿತು.
ಈ ಪುನರ್ಮಿಲನ ಮತ್ತು ಗುರು ವಂದನಾ ಸಮಾರಂಭವು ಶಾಲೆಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಪುಟವಾಗಿ ಅಚ್ಚಳಿಯದ ನೆನಪು ಬಿಟ್ಟಿತು.

