

ಕುಂದಾಪುರ; ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ 14-07-2026 ರಂದು ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಗಿನಿ ಸುಗುಣ ಇವರು ದೀಪ ಬೆಳಗುವುದರ ಮೂಲಕ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಮನ್ವಯ ಸಂಪನ್ಮೂಲ ಅಧಿಕಾರಿಗಳಾಗಿರುವ ಪ್ರದೀಪ್ ಕುಮಾರ್ ಇವರು ಪೋಷಕರನ್ನು ಉದ್ದೇಶಿಸಿ ಮಕ್ಕಳಿಗೆ ಪಾಲಕರೇ ಆದರ್ಶಪ್ರಾಯರಾಗುತ್ತಾರೆ. ಬದ್ಧತೆ, ನಿಷ್ಠೆ ಇವುಗಳನ್ನು ಮಕ್ಕಳು ನೋಡಿ ಅನುಸರಿಸಿ ಕಲಿಯುತ್ತಾರೆ. ಹೆತ್ತವರು ಹಿರಿಯರಿಗೆ ಗೌರವ ಕೊಟ್ಟಾಗ ಮಗು ಕೂಡ ಇತರರಿಗೆ ಗೌರವ ಕೊಡುತ್ತದೆ. ಹೆತ್ತವರು ತಮ್ಮ ಮಕ್ಕಳಲ್ಲಿ ಓದುವ ಹವ್ಯಾಸ ಇಚ್ಚಾ ಶಕ್ತಿ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಬೇಕು. ಪ್ರತಿ ಮಗು ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ ಆದ್ದರಿಂದ ಪೋಷಕರು ಮಕ್ಕಳೊಡನೆ ಕಾಲ ಕಳೆಯಲು ಸಮಯವನ್ನು ಮೀಸಲಿಟ್ಟರೆ ಅವರ ವಿಕಾಸಕ್ಕೆ ಸಹಾಯವಾಗುತ್ತದೆ. ಮಕ್ಕಳಿಗೆ ನಿಮ್ಮ ಕಷ್ಟದ ಬಗ್ಗೆ ಅರಿವು ಮೂಡಿಸಬೇಕು. ಪೋಷಕರು ಟಿವಿ ಧಾರವಾಹಿಗಳಿಂದ ದೂರವಿರಬೇಕು. ಮಕ್ಕಳಿಗೆ ಯಾವ ಕಾರಣಕ್ಕೂ ಮೊಬೈಲನ್ನು ನೀಡಬೇಡಿ. ಶಾಲೆಯಿಂದ ಮನೆಗೆ ಬಂದಾಗ ಶಾಲೆಯಲ್ಲಿ ಆ ದಿನ ನಡೆದ ಪಾಠಗಳ ಬಗ್ಗೆ ವಿಚಾರಿಸಬೇಕು’ ಎಂದು ತಿಳಿಸಿದರು
ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿ ಇವರು ಕಳೆದ ಸಾಲಿನ ಹಾಗೂ ಪ್ರಸ್ತುತ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಕಳೆದ ಸಾಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ರವಿಚಂದ್ರ ಖಾರ್ವಿ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಮುಗಿದ ನಂತರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಾಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ರವಿಚಂದ್ರ ಖಾರ್ವಿ ಸರ್ವಾನುಮತದಿಂದ ಪುನರಾಯ್ಕಯದರು. ಶಾಲಾ ಶಿಕ್ಷಕರಾದ ಮೈಕಲ್ ಪುಟಾರ್ಡೊ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ಇವರು ವಂದಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
















