

ಕೋಲಾರ: ಸ್ವಯಂ ಉದ್ಯೋಗಕ್ಕೆ ಆಸಕ್ತಿ ಇರುವ ಯುವಕರು ಹಾಗೂ ಮಹಿಳೆಯರಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (RSETI), ಹೊನ್ನೇನಹಳ್ಳಿ, ಕೋಲಾರದಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. 1992ರಲ್ಲಿ ಆರಂಭವಾದ ಈ ಸಂಸ್ಥೆ ಈಗಾಗಲೇ 33 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 37 ಸಾವಿರಕ್ಕೂ ಹೆಚ್ಚು ಜನರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿದೆ.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಕೆನರಾ ಬ್ಯಾಂಕ್ ಶತಮಾನೋತ್ಸವ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಅಣಬೆ ಬೆಳೆಗಾರಿಕೆ, ಜೇನು ಸಾಕಾಣಿಕೆ, ಮೀನುಗಾರಿಕೆ, ಕೋಳಿ ಹಾಗೂ ಕುರಿ ಸಾಕಾಣಿಕೆ, ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಹಾರ್ಡ್ವೇರ್-ನೆಟ್ವರ್ಕಿಂಗ್, ಸೆಲ್ಫೋನ್ ರಿಪೇರಿ, ಪ್ಲಂಬಿಂಗ್, ಎಲೆಕ್ಟ್ರಿಕಲ್ ಮೋಟಾರ್ ರಿಪೇರಿ, ಹೊಲಿಗೆ ಯಂತ್ರ ತರಬೇತಿ, ಹಪ್ಪಳ-ಉಪ್ಪಿನಕಾಯಿ ತಯಾರಿ, ಕಾರ್ಪೆಂಟರಿ, ಫಾಸ್ಟ್ ಫುಡ್ ಸ್ಟಾಲ್, ಫೋಟೋಗ್ರಫಿ, ಪ್ರವಾಸಿ ಮಾರ್ಗದರ್ಶಿ ತರಬೇತಿ ಸೇರಿದಂತೆ 60 ಕ್ಕೂ ಹೆಚ್ಚು ಕೌಶಲ್ಯಾಧಾರಿತ ಕೋರ್ಸ್ಗಳನ್ನು ನೀಡಲಾಗುತ್ತಿದೆ.
ತರಬೇತಿ ಅವಧಿ ಚಟುವಟಿಕೆಯ ಪ್ರಕಾರ ಕನಿಷ್ಠ 6 ರಿಂದ ಗರಿಷ್ಠ 45 ದಿನಗಳವರೆಗೆ ಇರುತ್ತದೆ. 18 ರಿಂದ 45 ವರ್ಷದೊಳಗಿನ ಯಾರೇ ಆಗಿದ್ದರೂ ವಿದ್ಯಾಭ್ಯಾಸದ ಕಡ್ಡಾಯವಿಲ್ಲದೆ ಅರ್ಜಿ ಹಾಕಬಹುದು. ತರಬೇತಿ ಅವಧಿಯಲ್ಲಿ ಉಚಿತ ವಸತಿ, ಊಟ, ಕಲಿಕಾ ಸಾಮಗ್ರಿ ಒದಗಿಸಲಾಗುತ್ತದೆ. ಜೊತೆಗೆ ಉದ್ಯಮಶೀಲತಾ ದಕ್ಷತೆ, ಬ್ಯಾಂಕಿಂಗ್, ವಿಮೆ, ಮಾರುಕಟ್ಟೆ ನಿರ್ವಹಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿಶೇಷ ಜ್ಞಾನ ನೀಡಲಾಗುತ್ತದೆ.
ತರಬೇತಿ ಪೂರ್ಣಗೊಳಿಸಿದವರಿಗೆ ಕೆನರಾ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಆಸಕ್ತರು ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗಳು ಹಾಗೂ 5 ಪಾಸ್ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಸಂಸ್ಥೆಯಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 7760313833, 9483652240

