

ಶ್ರೀನಿವಾಸಪುರ : ಅರಣ್ಯ ಒತ್ತುವರಿ ತೆರವು ಕಾರ್ಯಕ್ರಮದಿಂದ ಭಾದಿತರಾದ ಸಣ್ಣ , ಅತಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಅವರ ಭಾಗದಲ್ಲಿ ಸರ್ಕಾರಿ ಜಮೀನು, ಲಭ್ಯ ಇದ್ದಲ್ಲಿ ಅರ್ಜಿ ಹಾಕಿಕೊಂಡರೆ ಅಂತಹವರಿಗೆ ಆದ್ಯತೆ ಮತ್ತು ಅರ್ಹತೆ ಮೇರೆಗೆ ಜಮೀನು ಮಂಜೂರು ಮಾಡಿಕೊಡಲಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು.
1999 ರಿಂದ 2004ರವರೆಗೂ ನಾನು ಶಾಸಕನಾಗಿದ್ದಾಗ ತಾಲೂಕಿನ ಎಲ್ಲಾ ಪಂಚಾಯ್ತಿಗಳಲ್ಲಿಯೂ ನಿವೇಶನ ರಹಿತ ಬಡವರಿಗೆ ನಿವೇಶನಗಳನ್ನು ಹಂಚುವ ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದರ ನಂತರ ಇದುವರೆಗೂ ತಾಲೂಕಿನಲ್ಲಿ ಯಾವುದೇ ನಿವೇಶನವಿಲ್ಲದ ಬಡವರಿಗೆ ಸೈಟನ್ನು ಹಂಚುವ ಕಾರ್ಯಕ್ರಮ ನಡೆದಿಲ್ಲ. ಮುಂದಿನ ಒಂದು ವರ್ಷದಲ್ಲಿ ನಿವೇಶನವಿಲ್ಲದ ಅರ್ಹ ಬಡವರಿಗೆ ನಿವೇಶನಗಳನ್ನು ಗುರುತಿಸಿ ಹಂಚುವ ಕಾರ್ಯಕ್ರಮವನ್ನು ಪ್ರಾಥಮಿಕ ಆದ್ಯತೆ ಮೇರೆಗೆ ತೆಗೆದುಕೊಳ್ಳುತ್ತೇವೆ.ಎಂದರು.
ಇಒ ಕೆ.ಸರ್ವೇಶ್, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

