(✒️ ಶಬ್ಬೀರ್ ಅಹ್ಮದ್, ಪತ್ರಕರ್ತ ಶ್ರೀನಿವಾಸಪುರ)

“ಹೃದಯದಿಂದ ನೀಡಲಾದ ಶಿಕ್ಷಣವು ಕ್ರಾಂತಿಯನ್ನು ತರಬಲ್ಲುದು” ಎಂಬ ಶಾಶ್ವತ ಸಂದೇಶವನ್ನು ನೀಡಿದ ಮೌಲಾನಾ ಅಬುಲ್ ಕಲಾಮ್ ಆಝಾದ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಲ್ಲೊಬ್ಬರಾಗಿದ್ದು, ದೇಶದ ಮೊದಲ ಶಿಕ್ಷಣ ಮಂತ್ರಿಯಾಗಿ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಅಡಿಗಲ್ಲು ಹಾಕಿದ ಮಹಾನ್ ವ್ಯಕ್ತಿ. ಅವರ ಜೀವನ, ತತ್ವಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳು ಇಂದಿಗೂ ಪ್ರೇರಣೆಯ ದೀಪಸ್ತಂಭಗಳಾಗಿ ನಿಂತಿವೆ.
ಮೌಲಾನಾ ಅಬುಲ್ ಕಲಾಮ್ ಆಝಾದ್ ಅವರ ಜೀವನ ಮತ್ತು ಹೋರಾಟ
1888ರ ನವೆಂಬರ್ 11ರಂದು ಮಕ್ಕಾ ನಗರದಲ್ಲಿ ಜನಿಸಿದ ಆಝಾದ್ ಬಾಲ್ಯದಲ್ಲಿಯೇ ಅಸಾಧಾರಣ ಬುದ್ಧಿಶಕ್ತಿ ತೋರಿದರು. ಅವರು ಅರಬಿ, ಫಾರ್ಸಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪರಿಣತಿ ಗಳಿಸಿದರು. ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಆಧುನಿಕ ವಿದ್ಯೆಗಳಲ್ಲೂ ಆಸಕ್ತಿ ತೋರಿದರು. ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳತ್ತ ಆಕರ್ಷಿತರಾಗಿ ‘ಅಲ್-ಹಿಲಾಲ್’ ಮತ್ತು ‘ಅಲ್-ಬಲಾಘ್’ ಪತ್ರಿಕೆಗಳ ಮೂಲಕ ಬ್ರಿಟಿಷರ ಶೋಷಣೆಯ ವಿರುದ್ಧ ಪ್ರಬಲ ಧ್ವನಿ ಎತ್ತಿದರು.
ಅವರು ಖಿಲಾಫತ್ ಚಳವಳಿ, ಅಸಹಕಾರ ಚಳವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿ ಹಲವಾರು ಬಾರಿ ಜೈಲು ಸೇರಿದರು.
ಶಿಕ್ಷಣದ ಬಗ್ಗೆ ಅವರ ದೃಷ್ಟಿಕೋನ
ಮೌಲಾನಾ ಅಬುಲ್ ಕಲಾಮ್ ಆಝಾದ್ ಅವರ ದೃಷ್ಟಿಯಲ್ಲಿ ಶಿಕ್ಷಣವು ಕೇವಲ ಪಾಠಪುಸ್ತಕದ ಜ್ಞಾನವಲ್ಲ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ರೂಪಿಸುವ ಶಕ್ತಿ , ಬೌದ್ಧಿಕತೆ, ನೈತಿಕತೆ ಮತ್ತು ಮಾನವೀಯತೆ ಬೆಳೆಸುವ ಸಾಧನ ಅವರ ಅಭಿಪ್ರಾಯದಲ್ಲಿ
ಧಾರ್ಮಿಕ, ಜಾತಿ, ಭಾಷಾ ಅಂತರವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ಹಕ್ಕು ಇರಬೇಕು.
ಬಡತನ, ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಪರಿಹಾರ. ಹೆಣ್ಣುಮಕ್ಕಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಶಿಕ್ಷಣವಿಲ್ಲದೆ ದೇಶದ ಪ್ರಗತಿ ಅಸಾಧ್ಯ .
ಅವರು ಸ್ಪಷ್ಟವಾಗಿ ಹೇಳಿದ್ದು “ಜ್ಞಾನವಿಲ್ಲದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲಾರದು ಶಿಕ್ಷಣವಿಲ್ಲದ ಸಮಾಜ ಕತ್ತಲೆಯಲ್ಲಿ ಸಿಲುಕುತ್ತದೆ.”
ಸ್ವಾತಂತ್ರ್ಯಾನಂತರದ ಶಿಕ್ಷಣ ಕ್ರಾಂತಿ
ಸ್ವಾತಂತ್ರ್ಯಾನಂತರ ದೇಶದ ಮೊದಲ ಶಿಕ್ಷಣ ಮಂತ್ರಿಯಾಗಿ ಅವರು ಕೈಗೊಂಡ ಕ್ರಮಗಳು,
ಪ್ರಾಥಮಿಕ ಶಿಕ್ಷಣ ಉಚಿತ ಮತ್ತು ಕಡ್ಡಾಯ ಮಾಡುವುದು , ತಾಂತ್ರಿಕ ಮತ್ತು ಉನ್ನತ ಶಿಕ್ಷಣಕ್ಕೆ ಉತ್ತೇಜನ (IITಗಳು, IISc ಸ್ಥಾಪನೆಗೆ ಪ್ರೇರಣೆ) , ಕೇಂದ್ರ ಶಿಕ್ಷಣ ಸಲಹಾ ಮಂಡಳಿ ಮುಖಾಂತರ ರಾಷ್ಟ್ರೀಯ ಶಿಕ್ಷಣ ನೀತಿ ರೂಪಣೆ , ವಿಶ್ವವಿದ್ಯಾಲಯಗಳ ವಿಸ್ತರಣೆ – ಡೆಹಲಿ, ಅಲಿಗಢ್ ಮುಂತಾದವುಗಳಿಗೆ ಬೆಂಬಲ
ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅಭಿವೃದ್ಧಿಗೆ ಕೊಡುಗೆ ಅವರ ಮುಂದಾಳತ್ವದಲ್ಲಿ
ರಾಷ್ಟ್ರೀಯ ಗ್ರಂಥಾಲಯ (National Library), ಸಾಹಿತ್ಯ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ (Sangeet Natak Academy) , ಲಲಿತಕಲೆ ಅಕಾಡೆಮಿ (Lalit Kala Academy)
ಇತ್ಯಾದಿ ಸಂಸ್ಥೆಗಳು ಸ್ಥಾಪನೆಯಾಗಿ ಭಾರತೀಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ದಾರಿ ತೋರಿದವು.
ಶ್ರೀನಿವಾಸಪುರ ಪಟ್ಟಣದಲ್ಲಿ ಮೌಲಾನಾ ಅಬುಲ್ ಕಲಾಮ್ ಆಝಾದ್ ಅವರ ಹೆಸರಿನಲ್ಲಿ ಸ್ಥಾಪಿತ ಮಾದರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ಗಳು , ಉಚಿತ ಪಠ್ಯಪುಸ್ತಕಗಳು, ಯೂನಿಫಾರ್ಮ್ ಹಾಗೂ ಅಧ್ಯಯನ ಸಾಮಗ್ರಿ , ಮಧ್ಯಾಹ್ನದ ಊಟ ಸೌಲಭ್ಯ , ಕಂಪ್ಯೂಟರ್ ಮತ್ತು ಡಿಜಿಟಲ್ ಪಾಠಗಳು ಇವುಗಳ ಮೂಲಕ ಬಡ ಹಾಗೂ ಅಲ್ಪಸಂಖ್ಯಾತ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ.

ಇಂದಿನ ಸಮಾಜಕ್ಕೆ ಸಂದೇಶ
ಇಂದಿನ ತಂತ್ರಜ್ಞಾನಯುಗದಲ್ಲೂ ಮೌಲಾನಾ ಅಬುಲ್ ಕಲಾಮ್ ಆಝಾದ್ ಅವರ ತತ್ವಗಳು ಶಾಶ್ವತ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ , ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ , ಅಲ್ಪಸಂಖ್ಯಾತರ ಸಬಲೀಕರಣಕ್ಕೆ ಶಿಕ್ಷಣ. “ಶಿಕ್ಷಣದ ಬಾಗಿಲುಗಳು ಎಲ್ಲರಿಗೂ ಸಮಾನವಾಗಿ ತೆರೆದಾಗ ಮಾತ್ರವೇ ನಿಜವಾದ ಪ್ರಜಾಪ್ರಭುತ್ವ ಬಲವಾಗುತ್ತದೆ.”
ಮೌಲಾನಾ ಅಬುಲ್ ಕಲಾಮ್ ಆಝಾದ್ ಅವರ “ಹೃದಯದಿಂದ ನೀಡಲಾದ ಶಿಕ್ಷಣವು ಕ್ರಾಂತಿಯನ್ನು ತರಬಲ್ಲುದು” ಎಂಬ ಮಾತು ಇಂದಿಗೂ ಶಕ್ತಿಯುತ. ಅವರು ಹೇಳಿದಂತೆ “ಜ್ಞಾನವೇ ಶಕ್ತಿ; ಮೌಲ್ಯಾಧಾರಿತ ಶಿಕ್ಷಣವಿಲ್ಲದೆ ರಾಷ್ಟ್ರಕ್ಕೆ ನಿಜವಾದ ಸ್ವಾತಂತ್ರ್ಯ ಸಾಧ್ಯವಿಲ್ಲ.”

