

ಕುಂದಾಪ್ರ ; ಭಾಷೆ ನಾಶ ಆದ್ರೆ ಸಂಸ್ಕೃತಿ ಸತ್ತಂತೆ. ಕುಂದಾಪ್ರ ಕನ್ನಡ ಭಾಷೆ ಉಳಿದಿದೆ, ರಂಗಾಗಿದೆ. ಕಳೆಗಟ್ಟಿದೆ. ಕುಂದಗನ್ನಡದಲ್ಲಿರುವ ಅಮೂಲ್ಯ ದಾಖಲೆಗಳನ್ನು ಕಾಪಾಡುವುದು ಅಗತ್ಯವಾಗಿದೆ. ಇದನ್ನು ಚಂದವಾಗಿ ಮುಂದಿನ ಪೀಳಿಗೆಗೆ ರವಾನಿಸಬೇಕು. ಅದಕ್ಕಾಗಿ ಪದಗಳ, ಸಾಹಿತ್ಯದ ದಾಖಲೀಕರಣವಾಗಬೇಕು. ಕುಂದ ಕನ್ನಡ ಉಳಿಸಲು ಸಾಕಷ್ಟು ಕಾರ್ಯಕ್ರಮ ನಾವು ಮಾಡಿದ್ದೇವೆ. ಆದರೆ ಬರೇ ಗೌಜಿಯಿಂದ ಕುಂದಾಪ್ರ ಕನ್ನಡ ಬೆಳೆಯದು, ಇದಕ್ಕಾಗಿ ಹಿಂದೆ ಶ್ರಮಿಸಿದ ಹಿರಿಯರ ಸಂಗ್ರಹವನ್ನು ಉಳಿಸಿಕೊಳ್ಳಬೇಕು. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಉತ್ತಮ ಹೆಜ್ಜೆ ಇಟ್ಟಿದೆ” ಎಂದು ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಹೇಳಿದರು. ಅವರು ರವಿವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕುಂದಗನ್ನಡ ಭಾಷಾಭಿವೃದ್ಧಿ ವೇದಿಕೆಯ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ಶಿಕ್ಷಕ ಸತೀಶ್ ಕುಮಾರ್ ವಡ್ಡರ್ಸೆ, ಕುಂದಾಪ್ರ ಕನ್ನಡದ ಅನೇಕ ಶಬ್ದಗಳ ಬಳಕೆ ಕಡಿಮೆಯಾಗಿದೆ. ಇವು ಮುಂದಿನ ಪೀಳಿಗೆಗೆ ಸುಲಭದಲ್ಲಿ ಸಿಗುವಂತಿರಬೇಕು. 60 ವಯಸ್ಸು ದಾಟಿದವರ ಬಳಿ ಕುಂದ ಕನ್ನಡದ ಅಪಾರ ಸಂಪತ್ತಿದೆ. ಇದು ಯುವ ಪೀಳಿಗೆಗೆ ದಾಟಿಸಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ವೇದಿಕೆಯ ಸಂಚಾಲಕ ಯು. ಎಸ್. ಶೆಣೈ, “ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದ ಕುಂದ ಕನ್ನಡ 300 ಗ್ರಾಮಗಳ ಜನರ ಆಡು ಮಾತು. ನಮ್ಮ ಹಲವಾರು ಹಿರಿಯರು ಐದಾರು ದಶಕಗಳಿಂದ ಕುಂದಾಪ್ರ ಕನ್ನಡದ ಉಳಿವಿಗಾಗಿ ಶ್ರಮಿಸಿದ್ದಾರೆ. ಮಕ್ಕಳಿಗೆ ಆಸಕ್ತಿ ಆಗುವಂತೆ ಕುಂದ ಕನ್ನಡದ ಸಾಹಿತ್ಯ, ನಾಟಕ, ಜನಪದವನ್ನು ಬೆಳೆಸಬೇಕು. ಕುಂದ ಕನ್ನಡದ ಸಂಪತ್ತು ಹೊಂದಿರುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಆಗಬೇಕು” ಎಂದರು.
ಭAಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ ಅಧ್ಯಕ್ಷತೆ ವಹಿಸಿ, “ಕಾಲೇಜಿನ ರೇಡಿಯೋ ಕುಂದಾಪ್ರ 89.6 ನಿರಂತರವಾಗಿ ಕುಂದಾಪ್ರ ಕನ್ನಡದ ಕಾರ್ಯಕ್ರಮ ಬಿತ್ತರಿಸುತ್ತಿದೆ” ಎಂದರು.
ವೇದಿಕೆಯ ಆವರ್ಸೆ ಸುಧಾಕರ ಶೆಟ್ಟಿ ಮಾತನಾಡಿ, “ಈ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕಾರ್ಯಪ್ರವೃತ್ತರಾಗೋಣ” ಎಂದರು.
ನಿವೃತ್ತ ಉಪನ್ಯಾಸಕ ಪ್ರಭಾಕರ ಶೆಟ್ಟಿ, ಲೇಖಕ ಜಯವಂತ ಪೈ, ನಿವೃತ್ತ ಮುಖ್ಯಶಿಕ್ಷಕ ಸೋಮಶೇಖರ ಶೆಟ್ಟಿ, ನಿವೃತ್ತ ಸರಕಾರಿ ಅಧಿಕಾರಿ ಉಮಾನಾಥ ಗಂಗೊಳ್ಳಿ, ಕಾರ್ಮಿಕ ನಿರೀಕ್ಷಕ ವಿಜೇಂದ್ರ, ಲೇಖಕಿ ಸುಮನಾ ಆರ್. ಗಾಣಿಗ, ಸುಪ್ರಿತಾ ಪುರಾಣಿಕ, ರಾಜೀವ ಕೋಟ್ಯಾನ್, ಶ್ರೀರಾಜ್ ಕೊಠಾರಿ, ನಿತ್ಯಾನಂದ ಎನ್., ಪ್ರದೀಪ್ ಕುಮಾರ್ ಬಸ್ರೂರು, ತನುಜಾ ಕೋಟೇಶ್ವರ, ಸುಧೀಶ್ ಎಸ್. ಎನ್., ಪ್ರವೀಣ, ಪಂಚಮಿ, ಅನುಪ್ ಉರಾಳ, ರಾಹುಲ್ ಕೋಟ, ಗೋಪಾಲ್ ನಾಯ್ಕ್ ಸಂವಾದದಲ್ಲಿ ಭಾಗಿಯಾದರು. ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ನಿರ್ವಹಿಸಿದರು.

