

ಶ್ರೀನಿವಾಸಪುರ: ಪಟ್ಟಣದ ಆಂಬಿಷನ್ ನ್ಯಾಷನಲ್ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಶನಿವಾರ ಸೃಜನಾತ್ಮಕ ಮಕ್ಕಳ ವಾರ್ಷಿಕ ಕಲಾ, ಕರಕುಶಲ ಹಾಗೂ ವಿಜ್ಞಾನ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಾಲೆಯ ನಿರ್ವಹಣಾ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆದ ಈ ಪ್ರದರ್ಶನದಲ್ಲಿ, ವಿದ್ಯಾರ್ಥಿಗಳು ಸಮಾಜೋಪಯೋಗಿ ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದ ವಿವಿಧ ವಿಷಯಾಧಾರಿತ ಮಾದರಿ ಹಾಗೂ ಪ್ರದರ್ಶನಗಳನ್ನು ಸಿದ್ಧಪಡಿಸಿ ವೀಕ್ಷಕರ ಗಮನ ಸೆಳೆದರು.
ಸಂಚಾರ ನಿಯಮಗಳ ಮಹತ್ವ, ರೈಲ್ವೆ ಸಂಚಾರ ವ್ಯವಸ್ಥೆ, ಮಾನವ ಜೀರ್ಣಾಂಗ ವ್ಯವಸ್ಥೆ, ಮಣ್ಣಿನ ವಿವಿಧ ಪದರಗಳು, ದೆಹಲಿಯ ಕುತುಬ್ ಮಿನಾರ್, ಕರ್ನಾಟಕ ಹೈಕೋರ್ಟ್, ಕಚ್ಚಾ ಮನೆ ಪಕ್ಕಾ ಮನೆಗಳ ವೈಶಿಷ್ಟ್ಯಗಳು, ನಗರ ಪ್ರದೇಶಗಳಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಗ್ರಾಮೀಣ ಪ್ರದೇಶಗಳ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳು ವಿವರಾತ್ಮಕ ಮಾದರಿಗಳನ್ನು ಪ್ರದರ್ಶಿಸಿದರು.
ಇದೇ ವೇಳೆ ಆಹಾರ ಪದಾರ್ಥಗಳು ಮತ್ತು ಪೌಷ್ಟಿಕಾಂಶಗಳ ಕುರಿತು ಜಾಗೃತಿ ಮೂಡಿಸುವ ಯೋಜನೆಗಳು, ಸಮತೋಲನ ಆಹಾರದ ಅಗತ್ಯತೆ ಹಾಗೂ ಮಕ್ಕಳ ಆರೋಗ್ಯದಲ್ಲಿ ಪೋಷಕಾಂಶಗಳ ಪಾತ್ರದ ಬಗ್ಗೆ ಮಾಹಿತಿ ನೀಡುವ ಪ್ರದರ್ಶನಗಳು ಪೋಷಕರು ಹಾಗೂ ಸಾರ್ವಜನಿಕರ ಗಮನ ಸೆಳೆದವು. ಪರಿಸರ ಸಂರಕ್ಷಣೆ, ಮರುಬಳಕೆ ವಸ್ತುಗಳಿಂದ ತಯಾರಿಸಿದ ಕರಕುಶಲ ವಸ್ತುಗಳು ಮತ್ತು ವೈಜ್ಞಾನಿಕ ಚಿಂತನೆಗೆ ಪೂರಕವಾದ ವಿವಿಧ ಮಾದರಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು.
ಪ್ರದರ್ಶನವನ್ನು ಶನಿವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 3.30ರವರೆಗೆ ಜಾಮಿಯಾ ಮಸೀದಿ ಈದ್ಗಾ ಕಾಂಪೌಂಡ್ ಹತ್ತಿರದ ಚಿಂತಾಮಣಿ ರಸ್ತೆಯಲ್ಲಿರುವ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು. ಪೋಷಕರು, ಶಿಕ್ಷಣಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯ ಹಾಗೂ ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷ ಜಾಹಿದ್ ಅನ್ಸಾರಿ ಮಾತನಾಡಿ, ಮಕ್ಕಳಲ್ಲಿ ಸಂಚಾರ ಶಿಸ್ತು, ಆರೋಗ್ಯಕರ ಆಹಾರದ ಅರಿವು, ನಗರ , ಗ್ರಾಮೀಣ ವ್ಯವಸ್ಥೆಗಳ ಕುರಿತು ತಿಳುವಳಿಕೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂತಹ ಪ್ರದರ್ಶನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಇಕ್ರಾ ಶೈಕ್ಷಣಿಕ ಟ್ರಸ್ಟ್ನ ಕಾರ್ಯದರ್ಶಿ ಅಬಿದ್ ಅನ್ಸಾರಿ ಮಾತನಾಡಿ, ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುವುದರ ಜೊತೆಗೆ ಅವರಲ್ಲಿನ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತಿದೆ ಎಂದು ತಿಳಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಅತಿಕ್ ಅಹಮದ್, ಶಾಲೆಯ ಪ್ರಿನ್ಸಿಪಾಲ್ ಇಮ್ರಾನ್ ಪಾಷಾ, ಶಾಲಾ ಸಂಯೋಜಕರು ,
ಶಫಿ ಉಲ್ಲಾ ಖಾನ್, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.






