


ಶ್ರೀನಿವಾಸಪುರ: ರೈತರ ಜಮೀನುಗಳ ಹಕ್ಕು ರಕ್ಷಣೆ ಹಾಗೂ ಅರಣ್ಯ ಇಲಾಖೆಯ ಕ್ರಮಗಳನ್ನು ಖಂಡಿಸಿ ವಿವಿಧ ಜನಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಶ್ರೀನಿವಾಸಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಪಟ್ಟಣದ ಎಂ.ಜಿ. ರಸ್ತೆಯಲ್ಲಿ ಸಾಗಿದ ಪ್ರತಿಭಟನಾ ರ್ಯಾಲಿಯು ಅರಣ್ಯ ಇಲಾಖೆಯ ಕಚೇರಿ ಮುಂಭಾಗ ತಲುಪಿದ ಬಳಿಕ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ, ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ರೈತರ ಭೂಮಿಯ ಹಕ್ಕಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರೈತರು ಪೊಲೀಸ್ ಠಾಣೆಗಳಿಗೆ ನೀಡುವ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ರಾಜ್ಯ ಸಂಚಾಲಕ ಎನ್. ಮುನಿಶಾಮಿ ಮಾತನಾಡಿ, ಕಾಯ್ದಿರಿಸಿದ ಅರಣ್ಯ ಭೂಮಿ ಎಂಬ ನೆಪದಲ್ಲಿ ತಲೆಮಾರುಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನುಗಳಲ್ಲಿನ ಬೆಳೆಗಳನ್ನು ಜೆಸಿಬಿ ಮತ್ತು ಡೋಜರ್ಗಳ ಮೂಲಕ ನಾಶಪಡಿಸಲಾಗುತ್ತಿದೆ ಎಂದು ಆರೋಪಿಸಿದರು. ರೈತರ ಬಳಿ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳಿದ್ದರೂ, ಸಮಗ್ರ ಪರಿಶೀಲನೆ ನಡೆಸದೆ ಅವುಗಳನ್ನು ಅರಣ್ಯ ಭೂಮಿ ಎಂದು ಪರಿಗಣಿಸಿ ರೈತರಿಗೆ ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮಗಳ ವಿರುದ್ಧ ರೈತರು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸುತ್ತಿಲ್ಲ. ಬದಲಿಗೆ ರೈತರ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು. ರೈತರು ನೀಡುವ ದೂರುಗಳನ್ನು ಪೊಲೀಸರು ಸ್ವೀಕರಿಸಿ, ಕಾನೂನುಬದ್ಧವಾಗಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಸಬಾ, ಶಿವಪುರ, ಅಕ್ಕಿಪಲ್ಲಿ ಕಾಲೋನಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅರಣ್ಯ ಪ್ರದೇಶದ ಹೆಸರಿನಲ್ಲಿ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು. ರೈತರ ಕೃಷಿ ಭೂಮಿ ಹಾಗೂ ಜೀವನೋಪಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಎಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಟಿ.ಆರ್. ಸೂರ್ಯನಾರಾಯಣ ಮಾತನಾಡಿ, ಭೂಮಿಯ ಹಕ್ಕು ರೈತರ ಬದುಕಿನ ಪ್ರಮುಖ ಆಧಾರವಾಗಿದೆ. ರೈತರು ಬೆವರು ಸುರಿಸಿ ಕೃಷಿ ಮಾಡುತ್ತಿರುವ ಜಮೀನುಗಳನ್ನು ಏಕಾಏಕಿ ಕಸಿದುಕೊಳ್ಳಲು ಬಿಡುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲಿನ ದೌರ್ಜನ್ಯ ಹಾಗೂ ಕಿರುಕುಳವನ್ನು ನಿಲ್ಲಿಸಬೇಕು. ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನುಬದ್ಧವಾಗಿ ರೈತರ ಹಕ್ಕುಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ, ನವೀನ್ ಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ನಾಗದೇನಹಳ್ಳಿ ಶ್ರೀನಿವಾಸ್, ವಿ. ಮುನಿಯಪ್ಪ, ಡಾ. ವೆಂಕಟೇಶ್, ಸೀನಪ್ಪ, ಉಪ್ಪರಪಲ್ಲಿ ತಿಮ್ಮಯ್ಯ, ಕೋಸಂದ್ರ ರೆಡ್ಡಪ್ಪ, ಜಯಣ್ಣ, ಕೆ ಪಿ ಆರ್ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟ ಯಶವಂತ್ , ಬಿ.ಎ. ಸಯ್ಯದ್ ಫಾರೂಕ್ ಸೇರಿದಂತೆ ವಿವಿಧ ಜನಪರ ಮತ್ತು ರೈತ ಸಂಘಟನೆಗಳ ಮುಖಂಡರು, ರೈತರು ಹಾಗೂ ಹೋರಾಟಗಾರರು ಭಾಗವಹಿಸಿದ್ದರು.

