


ಶ್ರೀನಿವಾಸಪುರ: ತಾಲ್ಲೂಕಿನ ಗುಂಟಪಲ್ಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಡವೆಗಳನ್ನು ವಿದ್ಯುತ್ ಶಾಕ್ ನೀಡಿ ಕೊಂದು ಮಾಂಸ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೈಕಿ ಸದಾನಂದ ನಾಯಕ್ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ನಿಬ್ಬರು ಆರೋಪಿಗಳಾದ ಸುಬ್ರಮಣಿ ಮತ್ತು ಸತ್ಯಂ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಯಿಂದ ಎರಡು ಮೊಬೈಲ್ ಫೋನ್ಗಳು, ಕಡವೆಗಳನ್ನು ಬೇಟೆಯಾಡಲು ಬಳಸುತ್ತಿದ್ದ ಆಯುಧಗಳು ಹಾಗೂ ಸುಮಾರು 150ರಿಂದ 200 ಕೆ.ಜಿ. ತೂಕದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ವಲಯ ಅರಣ್ಯಾಧಿಕಾರಿ ಜಿ. ವಾಸುದೇವಮೂರ್ತಿ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಕುಮಾರ್, ಎಸ್.ಎನ್. ಮಂಜುನಾಥ್, ನವೀನ್ ಕುಮಾರ್, ಬೀಟ್ ಫಾರೆಸ್ಟ್ ಅಧಿಕಾರಿಗಳಾದ ಮೋಹನ್ ಸಿಂಗ್, ಜಮೀರ್ ಪಾಷ, ಅರಣ್ಯ ವೀಕ್ಷಕ ಕೆ.ಎಂ. ನಾಸಪ್ಪ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

