

ಉಡುಪಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವೊಂದು ಪ್ರಕರಣಗಳನ್ನು ಅತೀ ಶೀಘ್ರದಲ್ಲಿ ಬಯಲಿಗೆಳೆದು ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿ ಸಮುದಾಯದ ಜನರಲ್ಲಿ ವಿಶ್ವಾಸವನ್ನು ಮೂಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವರ ಇಲಾಖೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಸಮುದಾಯದ ಪರವಾಗಿ ಬುಧವಾರ ಅಭಿನಂದಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಪದಾಧಿಕಾರಿಗಳ ನಿಯೋಗ ಅಭಿನಂದನೆಯನ್ನು ತಿಳಿಸಿತು.
ಈ ವೇಳೆ ಮಾತನಾಡಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ಶಿರ್ವ ಅವರು ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು ಕ್ರೈಸ್ತ ಸಮುದಾಯಕ್ಕೆ ಆಘಾತ ತಂದಿದ್ದವು. ಆದರೆ ಪ್ರಕರಣಗಳನ್ನು ತನ್ನ ಇಲಾಖೆಯ ಸಿಬಂದಿಗಳ ಮೂಲಕ ಅತೀ ಶೀಘ್ರವಾಗಿ ಸ್ಪಂದಿಸಿ ಪ್ರಕರಣಗಳನ್ನು ಭೇದಿಸಿ ಅಪರಾಧಿಗಳನ್ನು ಬಂಧಿಸುವ ಮೂಲಕ ಮಾದರಿ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಮೂಲಕ ಸಮುದಾಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮುದಾಯದ ಸಹಕಾರ ಸದಾ ನೀಡುವುದಾಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಇಲಾಖೆ ಸದಾ ಪ್ರತಿಯೊಂದು ಪ್ರಕರಣಗಳನ್ನು ಎಚ್ಚರಿಕೆಯಿಂದ ಗಮನಿಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದು ಇಲಾಖೆಯ ಅಧಿಕಾರಿಗಳ ಶ್ರಮ ಮತ್ತು ಸಹಕಾರದಿಂದ ಸಾಧ್ಯವಾಗಿದೆ. ಕ್ರೈಸ್ತ ಸಮುದಾಯದ ತೋರಿದ ಪ್ರೀತಿಯನ್ನು ಸದಾ ಗೌರವಿಸುವುದಾಗಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಮುದಾಯದ ಸಹಕಾರ ಬಯಸುವುದಾಗಿ ಹೇಳಿದರು.
ನಿಯೋಗದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಅನಿಲ್ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಜುಲಿಯೆಟ್ ಡಿಸೋಜಾ, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬನ್ ಲೂವಿಸ್, ನಿಯೋಜಿತ ಅಧ್ಯಕ್ಷರಾದ ಲೂವಿಸ್ ಡಿಸೋಜಾ, ಎಐಸಿಯು ರಾಜ್ಯಾಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಮೇರಿ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಶಿರ್ವ ವಲಯಾಧ್ಯಕ್ಷರಾದ ಜೆರಾಲ್ಡ್ ರೊಡ್ರಿಗಸ್, ಉಡುಪಿ ವಲಯಾಧ್ಯಕ್ಷರಾದ ಕಿರಣ್ ಲೂವಿಸ್, ಕಲ್ಯಾಣಪುರ ವಲಯಾಧ್ಯಕ್ಷ ಜೊಯೆಲ್ ಆಲ್ಮೇಡಾ, ಪದಾಧಿಕಾರಿಗಳಾದ ರೊಸಾರಿಯೋ ಡಿಸೋಜಾ, ಹಾಗೂ ಇತರರು ಉಪಸ್ಥಿತರಿದ್ದರು.


