

ಬೈಂದೂರು; ಫೆಬ್ರವರಿ 12 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಬೈಂದೂರು ತಾಲೂಕು ಕಟ್ಟಡ ನಿರ್ಮಾಣ ಕಾರ್ಮಿಕರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಬೃಹತ್ ಮೆರವಣಿಗೆಯಲ್ಲಿ ಘೋಷಣೆಯೊಂದಿಗೆ ಸಾಗಿ ರಸ್ತೆತಡೆ ಮಾಡಿ, ಆಡಳಿತ ಸೌಧ ಎದುರು ಪ್ರತಿಭಟಿಸಿದರು.
ಕೇಂದ್ರ ಸರ್ಕಾರವು 2019-20 ರಲ್ಲಿ ಕಾರ್ಮಿಕ ಕಾನೂನುಗಳನ್ನು ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಹಾಗೂ ವೃತ್ತಿ ಸುರಕ್ಷತಾ ಮತ್ತು ಕೆಲಸದ ಪರಿಸ್ಥಿತಿ ಹೆಸರಿನಲ್ಲಿ ನಾಲ್ಕು ಸಂಹಿತೆಗಳನ್ನಾಗಿ ರೂಪಿಸಿ ಸಂಸತ್ತಿನಲ್ಲಿ ಅಂಗೀಕರಿಸಿ, 2025ರ ನವಂಬರ್ 21 ರಂದು ಜಾರಿಗೊಳಿಸಿತು. ಸಂಹಿತೆಯಲ್ಲಿ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಾರ್ಮಿಕರಿಗೆ ನ್ಯಾಯ ಮರೀಚಿಕೆಯಾಗಿದೆ. ದಿನವೊಂದಕ್ಕೆ ಕನಿಷ್ಠ ರೂ. 178/- ವೇತನವು ದುಡಿಯುವ ವರ್ಗದವರಿಗೆ ಎಸಗಿದ ವಂಚನೆಯಾಗಿದೆ. ನೂತನ ಸಂಹಿತೆಯಲ್ಲಿ ನಿಗಧಿತ ಅವಧಿಯ ನೌಕರರ ನೇಮಕಕ್ಕೆ ಅವಕಾಶ ನೀಡಿದ್ದು, 300 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಉದ್ಯಮ – ಸಂಸ್ಥೆಯು ಸರ್ಕಾರದ ಪೂರ್ವಾನುಮತಿ ಪಡೆಯದೇ ಕಾರ್ಮಿಕರನ್ನು ವಜಾಗೊಳಿಸಲು ಅವಕಾಶ ನೀಡಿದೆ. ಕಾರ್ಮಿಕರನ್ನು ಸಂಘಟಿಸುವ ಹಕ್ಕು, ನ್ಯಾಯಬದ್ಧ ಬೇಡಿಕೆಗಳಿಗೆ ಮುಷ್ಕರ ನಡೆಸುವ ಹಕ್ಕು, ನಿಗಧಿತ ಅವಧಿಯ ಕೆಲಸದ ಹಕ್ಕು ಕಾರ್ಮಿಕರನ್ನು ಸಾಮಾಜಿಕ ಭದ್ರತೆಯಿಂದ ವಂಚಿತರನ್ನಾಗಿಸುವ ನಿಯಮಾವಳಿಗಳನ್ನು ಸಂಹಿತೆಗಳಲ್ಲಿ ರೂಪಿಸಲಾಗಿದೆ ಎಂದು ಕಾರ್ಮಿಕ ಮುಖಂಡ ಗಣೇಶ್ ತೊಂಡೆಮಕ್ಕಿಯವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ಕಾರ್ಮಿಕ ಸಂಹಿತೆಗಳ ಅನುಷ್ಠಾನದೊಂದಿಗೆ ಕಾರ್ಮಿಕರ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ದುಡಿಯುವ ವರ್ಗದ ಜನರು ಹೋರಾಟದೊಂದಿಗೆ ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ಕಿತ್ತುಕೊಂಡು ನೋಂದಾಯಿತ ಕಟ್ಟಡ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ಪ್ರಯೋಜನಗಳಿಂದ ವಂಚಿತರನ್ನಾಗಿಸುತ್ತಿದೆ. ರಾಜ್ಯದಲ್ಲಿ ನಾಲ್ಕು ಲೇಬರ್ ಕೋಡ್ ಗಳು ಜಾರಿಯಾದಲ್ಲಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರ ದೊಡ್ಡ ವಿಭಾಗವು ಈಗಿರುವ ಕಾನೂನು ರಕ್ಷಣೆ ವ್ಯಾಪ್ತಿಯಿಂದ ಹೊರಹೊಮ್ಮುತ್ತದೆ. ದೇಶವನ್ನು ಕಟ್ಟುವ, ಸಂಪತ್ತನ್ನು ಉತ್ಪಾದಿಸುವ ಕಟ್ಟಡ ಕಾರ್ಮಿಕರು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸುತ್ತಿದ್ದು, ಕರ್ನಾಟಕ ಸರಕಾರವು 1996 ರ ಕಾಯಿದೆಯ ಉದ್ದೇಶವನ್ನು ಗೌರವಿಸಿ, ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ, ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂತನ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂಬ ಘೋಷಣೆಯನ್ನು ಮುಖ್ಯಮಂತ್ರಿಯವರು ಮಾಡಬೇಕು ಹಾಗೂ ಕಲ್ಯಾಣ ಮಂಡಳಿಯನ್ನು ಪುನರ್ ರಚಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಸಂಘದ ಅಧ್ಯಕ್ಷರಾದ ರಾಜೀವ್ ಪಡುಕೋಣೆಯವರು ಒತ್ತಾಯಿಸಿದರು.
ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಭಾಗವಾಗಿ ತಹಶೀಲ್ದಾರ್ ರವರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದ್ದು, ಪದಾಧಿಕಾರಿಗಳಾದ ಮರ್ಲ, ಶ್ರೀಧರ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ರೊನಾಲ್ಡ್ ರಾಜೇಶ್ ಪ್ರಾಸ್ತಾವಿಕವಾಗಿ ಮುಷ್ಕರದ ಉದ್ದೇಶ ಹಾಗೂ ನಾಲ್ಕು ಸಂಹಿತೆಗಳ ಕುರಿತು ಮಾತನಾಡಿದರು. ಜನವಾದಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಕೃಷಿಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷೆ ನಾಗರತ್ನ ನಾಡ, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕು ವ್ಯಾಪ್ತಿಯ ಸುಮಾರು 800 ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದು, ಕಾರ್ಯದರ್ಶಿ ವಿಜಯ ರವರು ಧನ್ಯವಾದಗೈದರು.





