

ಧಾರವಾಡ : ಲ್ಯಾಬ್ಗೆ ಹೋಗುವುದಾಗಿ ಹೇಳಿ (ಮಂಗಳವಾರ) ಮಧ್ಯಾಹ್ನ ಮನೆಯಿಂದ ಹೊರಹೋದ ಯುವತಿಯೊಬ್ಬಳು ಕೊಲೆಯಾದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಧಾರವಾಡದ ಹೊರವಲಯದಲ್ಲಿ ನಡೆದಿತ್ತು. ಈಗ ಯುವತಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಹತ್ಯೆ ಮಾಡಿ ಸ್ಥಳದಲ್ಲಿದ್ದ ಎಂಬ ಸ್ಪೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ. ಇದೀಗ ಆತನನ್ನೇ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಹೊರವಲಯದಲ್ಲಿ ಯುವತಿಯ ಶವವೊಂದು ಹತ್ಯೆಯಾದ ರೀತಿಯಲ್ಲಿ ಪತ್ತೆಯಾಗಿದ್ದು, ಝಕಿಯಾ ಮುಲ್ಲಾ (21) ಹತ್ಯೆಯಾದ ಯುವತಿ ಎಂದು ತಿಳಿದು ಬಂದಿದೆ. ಆಕೆಯ ಆತ್ಮೀಯ ಸ್ನೇಹಿತ ಸಾಬೀರ್ ಮುಲ್ಲಾ ಎಂಬಾತನೇ ವೇಲ್ನಿಂದ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿದ್ದು, ‘ಮೃತ ಯುವತಿಯ ಸ್ನೇಹಿತ ಸಾಬೀರ್ ಎಂಬಾತ ಕಳೆದ ಮೂರ್ನಾಲ್ಕು ವರ್ಷಗಳಿಂದ ಆ ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದ. ನಮಗೆ ಬಂದ ಮಾಹಿತಿ ಪ್ರಕಾರ ಅವರ ಕುಟುಂಬಸ್ಥರಿಗೆ ಇವರಿಬ್ಬರ ಮದುವೆ ಮಾಡುವುದಕ್ಕೆ ಇಷ್ಟ ಇತ್ತು. ಈ ವಿಚಾರವಾಗಿ ಸ್ವಲ್ಪ ಅಸಮಾಧಾನ ಬಂದಿದೆ. ಹೀಗಾಗಿ 20ನೇ ತಾರೀಖು ಸಾಬೀರ್ ಝಕಿಯಾ ಅವರನ್ನು ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ 12 ಗಂಟೆಗೆ ತಾಂತ್ರಿಕ ದಾಖಲೆ ಆಧಾರದ ಮೇಲೆ ಸಾಬೀರ್ನನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ”ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಇಬ್ಬರ ನಡುವೆ ಈ ಗಲಾಟೆ ನಡೆದಿದೆ. ಘಟನಾ ಸ್ಥಳದಲ್ಲಿ ಇನ್ನೊಬ್ಬರು ಇದ್ದರು. ನಮ್ಮ ತನಿಖೆ ಇನ್ನೂ ಮುಂದುವರೆದಿದೆ. ಇಬ್ಬರಿಗೂ ಮದುವೆ ಫಿಕ್ಸ್ ಆಗಿತ್ತು. ಎಂಗೇಜ್ಮೆಂಟ್ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದು ಹೇಳಿದರು.
ಈ ಕುರಿತು ಸ್ಥಳೀಯರಾದ ಮೊಹಮ್ಮದ್ ಇರ್ಫಾನ್ ಮಾತನಾಡಿ, ‘ಘಟನಾ ಸ್ಥಳದಲ್ಲಿ ಹುಡುಗ ಹಾಗೂ ಅವರ ತಂದೆ ಪ್ರಾರಂಭದಿಂದಲೂ ಮಿಸ್ ಗೈಡೆನ್ಸ್ ಮಾಡುತ್ತಲೇ ಇದ್ದರು. ಇದು ಸುಸೈಡ್ ಇರಬಹುದು, ನಾವೇ ಮಣ್ಣು ಮಾಡೋಣ ಎಂದು ಹೇಳಿದರು. ಅದಕ್ಕೆ ನಮ್ಮ ಕುಟುಂಬದವರು ಒಪ್ಪಲಿಲ್ಲ. ಇದು ಕೊಲೆಯಾಗಿದೆ, ತನಿಖೆಯಾಗಲಿ. ಇಲಾಖೆಯವರು ಬರಲಿ ಎಂದು ನಾವು ಒತ್ತಾಯ ಮಾಡಿದೆವು. ರಾತ್ರಿಯವರೆಗೂ ಆ ಹುಡುಗನ ತಂದೆ ಇಲ್ಲಿಯೇ ಇದ್ದರು. ಅವರು ಬೇರೆ ಬೇರೆ ವಿಷಯವನ್ನು ಹೇಳುತ್ತಿದ್ದರು. ಅವರು ಸತ್ಯ ಸಂಗತಿಯನ್ನು ಮುಚ್ಚಿಹಾಕಲು ಬಹಳ ಪ್ರಯತ್ನ ಮಾಡಿದರು. ಕೊಲೆ ಆರೋಪಿಗಳನ್ನು ಬಂಧನ ಮಾಡುವವರೆಗೆ ನಾವು ಮೃತದೇಹ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ವಿ. ಎಸ್ಪಿ ಗುಂಜನ್ ಆರ್ಯ, ಎಸಿಪಿ ಸಿದ್ದನಗೌಡ, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇಲ್ಲಿಗೆ ಬಂದು ನಮ್ಮೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಎಸ್ಪಿ ಅವರು, ಕೊಲೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ’ ಎಂದು ತಿಳಿದು ಬಂದಿದೆ.

