

ಕುಂದಾಪುರ: ಪತ್ರಿಕೆಗಳು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಹೇಳಿದರು.
ಅವರು ಜುಲೈ 1 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಪತ್ರಿಕಾ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪತ್ರಿಕೆಗಳು ಆರಂಭವಾದಾಗಿನಿಂದ ಸಾಮಾಜಿಕ ಜಾಗೃತಿ ಜೊತೆಗೆ ಅಭಿವೃದ್ಧಿಪರ ಚಿಂತನೆ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಐತಿಹಾಸಿಕ ಹಿನ್ನೆಲೆಯಲ್ಲಿ ಪತ್ರಿಕೆಗಳು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಜನರಲ್ಲಿ ಸ್ವಾತಂತ್ರ್ಯದ ಅದಮ್ಯತೆಯನ್ನು ಹುಟ್ಟು ಹಾಕಿತ್ತು. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ನಡುವೆ ಪತ್ರಿಕೆಗಳು ತಮ್ಮ ಸತ್ಯಾಸತ್ಯತೆ ಕಾಪಾಡಿಕೊಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಆಗಮಿಸಿದ್ದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್ ಅವರು ಮಾತನಾಡಿ ಪತ್ರಿಕೆಗಳ ನಮ್ಮಲ್ಲಿ ಜ್ಞಾನ ಮತ್ತು ವಿಮರ್ಶೆಯ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಸುರೇಶ್ “ಪತ್ರಿಕಾ ಒಂದು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಉಪನ್ಯಾಸಕಿ ಗೀತಾ ಪ್ರಭು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಉಪನ್ಯಾಸಕ ವಿದ್ಯಾಧರ ಪೂಜಾರಿ ವಂದಿಸಿದರು.


