

ಕುಂದಾಪುರ: ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಡಾ.ನಾರಾಯಣ ಸಭಾಹಿತ್ ಹೇಳಿದರು.
ಅವರು ಜುಲೈ 25ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇವರು ಆಯೋಜಿಸಿದ ‘ಶಿಕ್ಷಣ ಸುಧಾರಣೆ’ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಶಿಕ್ಷಕರು ಶಿಕ್ಷಣ ಸಂಸ್ಥೆಯಲ್ಲಿರುವ ಉತ್ತಮ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಅರಿತು ಅದಕ್ಕೆ ಪೂರಕವಾಗಿ ತಮ್ಮ ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸಂಶೋಧನಾ ಪ್ರವೃತ್ತಿಯ ಜೊತೆಗೆ, ವಿಮರ್ಶಾತ್ಮಕತೆಯ ಬರಹಗಳನ್ನು ಉತ್ತಮ ಗುಣಮಟ್ಟದ ಜರ್ನಲ್ ಗಳಲ್ಲಿ ಪ್ರಕಟಿಸಬೇಕು. ಅಲ್ಲದೇ ಸಂಸ್ಥೆಗೆ ವಿದ್ಯಾರ್ಥಿಗಳ ದಾಖಲಾತಿಯಾಗುವಲ್ಲಿ ಶಿಕ್ಷಕರ ಪಾತ್ರವಿದೆ. ಉತ್ತಮ ಶೈಕ್ಷಣಿಕ ಮತ್ತು ಜ್ಞಾನ ಪಡೆಯುವ ವಾತಾವರಣವನ್ನು ಶಿಕ್ಷಕರು ಸೃಷ್ಟಿಸಬೇಕು ಎಂದು ಹೇಳಿದರು. ಹಾಗಿದ್ದಾಗ ವಿದ್ಯಾರ್ಥಿಗಳ ದಾಖಲಾತಿಯು ಸಹ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಕಾರಿಗಳಾದ ಡಾ.ಕೆ.ಶ್ರೀಧರ ರಂಗನಾಥ ಪೈ ಮಾತನಾಡಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿಷಯ ಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿ ವಿಮರ್ಶಾತ್ಮಕ ಲೇಖನಗಳನ್ನು ಹೆಚ್ಚು ಪ್ರಕಟಿಸಬೇಕು ಎಂದು ಹೇಳಿದರು.
ಮತ್ತೋರ್ವ ಅತಿಥಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಶಿಕ್ಷಣಾಧಿಕಾರಿಗಳಾದ ನಾಗೇಶ್ ಪೈ ಮಾತನಾಡಿ ಕಲಿಸುವ ಮೊದಲು ಶಿಕ್ಷಕರ ವಿಶೇಷ ಅಧ್ಯಯನದ ತಯಾರಿಯ ಕುರಿತು ಸಂವಾದ ನಡೆಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಟಿ.ಸೋನ್ಸ್ ಮಾತನಾಡಿ ಶಿಕ್ಷಕರ ಹಿತಾಸಕ್ತಿಯನ್ನು ಕಾಪಾಡಲು ವಿಶ್ವಸ್ಥ ಮಂಡಳಿ ಹಾಗೂ ಆಡಳಿತ ಮಂಡಳಿ ಸಿದ್ಧವಿದೆ. ಆದರೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡುವ ಅಗತ್ಯತೆ ಇದೆ ಎಂದು ಹೇಳಿದರು
ಕಾರ್ಯದರ್ಶಿ ಯು.ಎಸ್.ಶೆಣೈ ಮಾತನಾಡಿ “ಕಳೆದ ಆರು ದಶಕಗಳ ಶ್ರೇಷ್ಠ ಶಿಕ್ಷಕರು ಈ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಕೀರ್ತಿ ತಂದಿದ್ದಾರೆ. ಅವರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಇಂದೂ ಸಹ ಶಿಕ್ಷಕರನ್ನು ಸ್ಮರಿಸುತ್ತಾ ಇದ್ದಾರೆ. ವಿದ್ಯಾರ್ಥಿಗಳು ನೆನಪಿಸುವಂತಹ ಸೇವೆ ಶಿಕ್ಷಕರು ನೀಡಬೇಕು ಎಂದು ಹೇಳಿದರು.
ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು ಅತಿಥಿಗಳನ್ನು ಗೌರವಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜ ಎಮ್ ವಂದಿಸಿದರು. ಕಂಪ್ಯೂಟರ್ ಉಪನ್ಯಾಸಕಿ ವಿಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

