ಕುಂದಾಪುರ ಸಂತ ಜೋಸೆಫ್ ವಿದ್ಯಾರ್ಥಿ ನಿಲಯದ ಶಾಲಾ ಮಕ್ಕಳೊಂದಿಗೆ ಕ್ರಿಸ್ಮಸ್ ಕೂಟ

ಕುಂದಾಪುರ, ಡಿ.24: ಸ್ಥಳೀಯ ಸಂತ ಜೋಸೆಫ್ ವಸತಿ ಶಾಲಾ ಮಕ್ಕಳೊಂದಿಗೆ ಕ್ರಿಸ್ಮಸ್ ಸಂತೋಷ ಕೂಟ ದಾನಿಗಳಾದ ಸ್ಟ್ಯಾನ್ಲಿ ಚೆರೀಯನ್ ಮತ್ತು ಕುಂದಾಪುರದ ಐವನ್ ಆಲ್ಮೇಡ ಕುಟುಂಬದ ವತಿಯಿಂದ ಡಿಸೆಂಬರ್ 23 ರಂದು ಜೋಸೆಫ್ ವಸತಿ ಗ್ರಹದಲ್ಲಿ ನಡೆಯಿತು.

   ಮುಖ್ಯ ಅತಿಥಿಗಳಾಗಿದ್ದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಕ್ರಿಸ್ಮಸ್ ಸಮಯದಲ್ಲಿ ಇಡೀ ಜಗತ್ತು ಸಂತೋಷವನ್ನು ಆಚರಿಸುತ್ತದೆ, ಇವತ್ತು ನಾವುಗಳು ನಿಮ್ಮ ಜೊತೆ ಈ ಸಂತೋಷವನ್ನು ಹಂಚಿಕೊಳ್ಳಲಿಕ್ಕೆ ನಿಮ್ಮ ಜೊತೆ ಸೇರಿದ್ದೆವೆ. ಯೇಸು ಸ್ವಾಮಿ ನಮಗೆ ಪಾಪಗಳಿಂದ ವಿಮೋಚನೆ ಗೊಳಿಸಲು ಈ ಧರೆಗೆ ಬಂದರು, ಜಗತ್ತಿಗೆ ಶಾಂತಿಯ ಅಗತ್ಯವಿದೆ, ಸ್ವಾಮಿ ಯೇಸು ಜಗತ್ತಿಗೆ ಶಾಂತಿ ದೂತನಾಗಿದ್ದಾನೆ, ಯೇಸುವಿಗೆ ಚಿಕ್ಕ ಮಕ್ಕಳೆಂದರೆ ಬಹಳ ಪ್ರೀತಿ, ಸ್ವರ್ಗರಾಜ್ಯವು ಚಿಕ್ಕ ಮಕ್ಕಳದು, ಏಕೆಂದರೆ, ಅವರಲ್ಲಿ ಮುಗ್ದತೆ ಇದೆ, ಪ್ರಮಾಣಿಕತೆ ಇದೆ, ನಿರ್ಮಲ ಮನಸ್ಸಿದೆ, ಕೊನೆಯವರೆಗೂ ಇದೇ ಮನ ಸ್ಥಿಯಲ್ಲಿ ನೀವು ಇರಬೇಕು” ಏಂದು ಅವರು ಕ್ರಿಸ್ಮಸ್ ಶುಭಾಶಯ ಕೋರಿದರು.

   ಕಲಿಕೆಯಲ್ಲಿ ಮುಂದಿದ್ದ ಹಲವು ವಿದ್ಯಾರ್ಥಿಗಳಿಗೆ ಐವನ್ ಆಲ್ಮೇಡಾರವರು ನಗದು ಬಹುಮಾನವನ್ನು ವಿತರಿಸಿದರು. ಮಕ್ಕಳಿಗಾಗಿ ಕಿರು ಆಟಗಳನ್ನು ನಡೆಸಲಾಯಿತು. ಮಕ್ಕಳು ವಿವಿಧ ನ್ರತ್ಯ ಹಾಡುಗಳ ಮೂಲಕ ರಂಜಿಸಿದರು. ವಿಲ್ಸನ್ ಆಲ್ಮೇಡಾ ಸಾಂತಾಕ್ಲಾಸ್ ರೂಪ ಧರಿಸಿ ಮಕ್ಕಳೊಂದಿಗೆ ನ್ರತ್ಯ ಮಾಡಿದರು.ಮಕ್ಕಳಿಗೆ ಕ್ರಿಸ್ಮಸ್ ಕೇಕ್ ಮತ್ತು ಉಟೋಪಚಾರದಿಂದ ಸಂತೋಷಪಡಿಸಲಾಯಿತು.

    ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಭೋಜನದ ಮೇಲೆ ಆಶಿರ್ವದಿಸಿದರು, ಅತಿಥಿಗಳಾಗಿ ಸಾಹಿತಿ ಬರ್ನಾಡ್ ಡಿಕೋಸ್ತಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ ಮತ್ತು ಇತರ ಧರ್ಮಭಗಿನಿಯವರು. ದಾನಿ ಕಾರ್ಮಿಣ್ ಆಲ್ಮೇಡಾ, ಜಾನೆಟ್ ಆಲ್ಮೇಡಾ, ಕಿಯೋನಾ ಆಲ್ಮೇಡಾ ಉಪಸ್ಥಿತರಿದ್ದರು.

    ವಸತಿ ನಿಲಯದ ಮುಖ್ಯಸ್ಥೆ ಸಿಸ್ಟರ್ ಆಶಾ ಸ್ವಾಗತಿಸಿದರು. ವಿದ್ಯಾರ್ಥಿಗಳು ನಿರೂಪಿಸಿ ವಂದಿಸಿದರು.   

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ,ರಮಾನಂದ ಕಾರಂತರ ಸಂಬಂಧಿಕರು ಹಾಗೂ ಸವಿತಾ ಫೌಂಡೇಶನ್, “ಆಯಿ” ಯಿಂದ ಬಿ.ಬಿ. ಹೆಗ್ಡೆ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ರೋ. ರಮಾನಂದ ಕಾರಂತರ ಸಂಬಂಧಿಕರು ಹಾಗೂ ಸವಿತಾ ಫೌಂಡೇಶನ್, “ಆಯಿ” ಹಂಗಳೂರು ಇವರ ದೇಣಿಗೆಯಿಂದ ಬೆಚ್ಚನೆಯ ಹಾಗೂ ತಣ್ಣನೆಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಬಿ. ಬಿ. ಹೆಗ್ಡೆ ಕಾಲೇಜಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ದಕ್ಷಿಣದ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷ ರೋ. ಯು.ಎಸ್.ಶೆಣೈ, ರೋ.ರಮಾನಂದ ಕಾರಂತ, ಪ್ರಾಂಶುಪಾಲ ಪ್ರೊ. ಕೆ. ಉಮೇಶ ಶೆಟ್ಟಿ ಹಾಗೂ ಉಪ ಪ್ರಾಂಶುಪಾಲ ಕೋವಾಡಿ ಚೇತನ್ ಶೆಟ್ಟಿ ಉಪಸ್ಥಿತರಿದ್ದರು.

ಕ್ರಿಸ್‍ಮಸ್: ಪ್ರೀತಿಸುವ ಕಲೆಯನ್ನು ಕಲಿಯಲು ಕರೆ:ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ

ನನ್ನ ಆತ್ಮೀಯ ಸ್ನೇಹಿತರೇ,
ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಿಸ್ಮಸ್ ಎಂದಾಕ್ಷಣ ಮೊದಲ ಅನಿಸಿಕೆ ಸಂತೋಷ ಹಾಗೂ ಉತ್ಸಾಹ. ವಿದ್ಯುತಾಲಂಕಾರಗಳು, ರಂಗುರಂಗಿನ ವಾತಾವರಣ. ಇನ್ನೊಂದು ಮನ ಸೆಳೆಯುವ ದೃಶ್ಯವೆಂದರೆ ದನದ ಕೊಟ್ಟಿಗೆಯಲ್ಲಿನ ಗೋದಲಿಯಲ್ಲಿ ಹುಟ್ಟಿದ ಬಾಲಯೇಸು. ಅಲ್ಲಿ ನೆಲೆಸಿದೆ ಸರಳತೆ ಹಾಗೂ ಶಾಂತತೆ. ಈ ದಿನ ನಮ್ಮ ಸಂತೋಷದಲ್ಲಿ ಭಾಗಿಯಾಗಲು ಬಂದಿದ್ದಕ್ಕಾಗಿ ಧನ್ಯವಾದಗಳು. “ಎನಗಿಂತ ಕಿರಿಯರಿಲ್ಲ” ಎಂಬಂತೆ ದೇವರು ಆತೀ ಸಣ್ಣವರಾಗಿ ಮಾನವರ ನಡುವೆ ಜನಿಸಿದರು. ಕೊಟ್ಟಿಗೆಯಲ್ಲಿ ಯೇಸುವಿನ ಜನನವು ನಮ್ಮ ಗಮನವನ್ನು ಸೆಳೆಯುತ್ತದೆ. ಚಿಕ್ಕದು, ಸುಂದರ ಎಂದು ಹೇಳಲಾಗುತ್ತದೆ. ಯಾವುದು ಸುಂದರ, ಅದು ನಮ್ಮನ್ನು ಆಕರ್ಷಿಸುತ್ತದೆ. ನಮ್ಮನ್ನು ಆತೀಯಾಗಿ ಆಕರ್ಷಿಸುವ ಸುಂದರವಾದ ಕಂದ- ಬಾಲ ಯೇಸು, ದೇವರು ಸಣ್ಣವನಾಗಿದ್ದಾನೆ. ಅವನಿಂದ ಪ್ರೀತಿಯ ಕಲೆಯನ್ನು ಕಲಿಯಲು ಅವನು ನಮ್ಮನ್ನು ಇಂದು ತನ್ನತ್ತ ಸೆಳೆಯುತ್ತಿದ್ದಾನೆ. ಯೇಸುವಿನ ಜೀವನವನ್ನು ಆವಲೋಕಿಸುತ್ತಾ, ಸ್ವಾಮಿ ವಿವೇಕಾನಂದರು ಹೇಳಿದರು: “ನಜರೇತಿನ ಯೇಸುವಿನ ದಿನಗಳಲ್ಲಿ, ನಾನು ಪ್ಯಾಲೆಸ್ತೀನ್‍ನಲ್ಲಿ ವಾಸಿಸುತ್ತಿದ್ದರೆ, ನಾನು ಅವರ ಪಾದಗಳನ್ನು ನನ್ನ ಕಣ್ಣೀರಿನಿಂದ ಅಲ್ಲ, ನನ್ನ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ!”. ಅವರು ಕ್ರಿಸ್ಮಸ್ ಮುನ್ನಾದಿನದಂದು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
ಯೇಸುಕ್ರಿಸ್ತರ ಬೋಧನೆಗಳನ್ನು ಸ್ವಾಮಿ ವಿವೇಕಾನಂದರಂತೆ, ಮಹಾತ್ಮಾ ಗಾಂಧೀಜಿಯವರು ಇಷ್ಟಪಟ್ಟರು ಮಾತ್ರವಲ್ಲ, ಅವರ “ಅಹಿಂಸಾ” ಚಳುವಳಿಯು ಯೇಸುಕ್ರಿಸ್ತರ ಉಪದೇಶಗಳಿಗೆ ಸರಿಸಮಾನಾಗಿಯೇ ಇತ್ತು. ಯೇಸುವು, ತನ್ನನು ಶಿಲುಬೆಗೇರಿಸಿ ಕೊಂದವರನ್ನು ಕ್ಷಮಿಸಿದಂತೆ, ಗಾಂಧೀಜಿ ಕೂಡ ತನ್ನ ವೈರಿಗಳ ವಿರುದ್ಧ ಪ್ರತೀಕಾರ ಬಯಸಲಿಲ್ಲ. ಪ್ರೀತಿ ಹಾಗೂ ಕ್ಷಮೆಗಳು ಯೇಸುವಿನ ಬೋಧನೆಯಲ್ಲಿ ಪ್ರಾಬಲ್ಯವಹಿಸಿದರೆ, ಅವುಗಳ ನಿಜವಾದ ಪರಿಪಾಲನೆಯನ್ನು ನಾವು ಗಾಂಧೀಜಿಯವರ ಜೀವನದಲ್ಲಿ ಕಾಣುತ್ತೇವೆ. ಗಾಂಧೀಜಿಯವರು ತಮ್ಮ ಸಮಕಾಲೀನ ಸಮಾಜದ ಕುಂದು ಕೊರತೆಗಳನ್ನು ಸಪ್ತ ಪಾತಕಗಳ ಮೂಲಕ ಗುರುತಿಸಿಕೊಟ್ಟರು: ತತ್ವರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ ಹಾಗೂ ತ್ಯಾಗವಿಲ್ಲದ ಧರ್ಮ. ಅಗಾಧ ಆಧ್ಯಾತ್ಮಿಕ ಶಕ್ತಿಯು ಮಾತ್ರ ಇಂತಹ ಪರಿಸ್ಥಿತಿಯಿಂದ ಹೊರಬರಲು ನೆರವಾಗಬಲ್ಲದು. ನೈಜ ದೈವಭಕ್ತಿ ಮಾತ್ರ ನಮ್ಮನ್ನು ಹಾಗೂ ಮುಂದಿನ ಪೀಳಿಗೆಯನ್ನು ಅತಿರೇಕಗಳಿಂದ ರಕ್ಷಿಸಬಲ್ಲುದು.
ನಮ್ಮ ಸುತ್ತಮುತ್ತಲೂ ಭ್ರ್ರಷ್ಟಾಚಾರವು ‘ಕ್ಯಾನ್ಸರ್ ರೋಗ’ ದಂತೆ ತಾಂಡವಾಡುತ್ತಿದೆ. ಇದು ನಮ್ಮ ಆತ್ಮಸಾಕ್ಷಿಯನ್ನು ಸಾಯಿಸುತ್ತಿದೆÉ. ದೃಶ್ಯ ಮಾಧ್ಯಮ, ಮುದ್ರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ನಾವು ದ್ವೇಷ, ಅನ್ಯಾಯ ಹಾಗೂ ಕ್ರೂರತೆÉಗಳ ನಿದರ್ಶನಗಳನ್ನು ಕಾಣುತ್ತಾ ಇದ್ದೇವೆ. ಬಲಾಢ್ಯರು ಹಾಗೂ ಧನಾಡ್ಯರಾಗುವುದೇ ನಮ್ಮ ಧ್ಯೇಯ ಎಂದು ಭಾಸವಾಗುತ್ತಿದೆ. ಎಲ್ಲವು ಧನಲಾಭದ ಸುತ್ತಮುತ್ತ ಕೇಂದ್ರೀಕ್ರತವಾಗಿದೆ. ಧರ್ಮವು ಕೇವಲ ಬಾಹ್ಯಾಚಾರಣೆಗಳಿಗೆ ಸೀಮಿತವಾಗಿ, ನಮ್ಮ ಮನ: ಪರಿವರ್ತನೆಗೋಳಿಸುವಲ್ಲಿ ವಿಫಲವಾಗಿದೆ. ಇದಕ್ಕೂ ಮಿಗಿಲಾಗಿ ದುಃಖ ಹಾಗೂ ಹತಾಶೆಯ ವಿಷಯವೇನೆಂದರೆ, ಸುತ್ತಮುತ್ತಲಿನ ಅತಿರೇಕಗಳು ನಮ್ಮನ್ನು ವಿಚಲಿತಗೊಳಿಸದೆ, ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೇವಲ ಫಾರ್ವರ್ಡ್ ಮಾಡುವುದರಲ್ಲಿ ನಾವು ಸೀಮಿತರಾಗಿದ್ದೇವೆ. ನಮ್ಮ ಆತ್ಮ ಸಾಕ್ಷಿಗಳು ನಿಷ್ಕ್ರಿಯವಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡತನ ಹಾಗೂ ಸರಳತೆಯಲ್ಲಿ ಜನಿಸಿದ ಯೇಸುವು ನೀಡುವ ಸಂದೇಶವಾದರೂ ಏನು?
ನಮ್ಮ ನಿಜವಾದ ಸ್ವಭಾವವನ್ನು ಅರಿತುಕೊಳ್ಳುವಂತೆ ಯೇಸು ಇಂದು ಬಯಸುತ್ತಾರೆ. ನಾವು ಪ್ರೀತಿಗಾಗಿ ರಚಿಸಲ್ಪಟ್ಟಿದ್ದೇವೆ, ದ್ವೇಷಕ್ಕಾಗಿ ಅಲ್ಲ. ದೇವರು ಪ್ರೀತಿ ಸ್ವರೂಪರು. ಅವರನ್ನು ದ್ವೇಷಿಸುವವರು, ದ್ವೇಷವನ್ನೆ ಉತ್ತೇಜಿಸುತ್ತಾರೆ. ಪ್ರೀತಿಯೇ ಸ್ವರ್ಗ ಮತ್ತು ದ್ವೇಷವೇ ನರಕ. ಪ್ರೀತಿಸುವ ಮತ್ತು ಸ್ವ-ತ್ಯಾಗ ಕೊಡುವ ಕಲೆಯನ್ನು ನಮಗೆ ಕಲಿಸಲು ದೇವರು ಮಾನವನಾದನು. ದೈವಿಕ ಮುಖವನ್ನು ಪಡೆಯಲು ನಮಗೆ ಸಹಾಯ ಮಾಡಲು ಅವರು ಮಾನವ ಮುಖವನ್ನು ಹೊಂದಿದ್ದಾರೆ. ಸರಳತೆ ಮತ್ತು ಬಡತನದಲ್ಲಿ ಜನಿಸಿದ ಮಗು ಮುಗ್ಧತೆ ಮತ್ತು ಪ್ರೀತಿಯ ಕಡೆಗೆ ನಮ್ಮ ಮಾರ್ಗಗಳನ್ನು ಬದಲಾಯಿಸಲು ಕರೆ ನೀಡುವ ಮೂಲಕ ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ. ಎಲ್ಲಾ ಸದ್ಗುಣಗಳಲ್ಲಿ ಪ್ರೀತಿಯು ಸರ್ವಶ್ರೇಷ್ಠವಾಗಿದೆ ಮತ್ತು ಅದು ಶಾಶ್ವತವಾಗಿರುತ್ತದೆ. ಯೇಸು ಸ್ವಾಮಿ ನಮ್ಮಲ್ಲಿ ನಿಜವಾದ ಪ್ರೀತಿಯನ್ನು ಹುಟ್ಟುಹಾಕಲಿ. ಪ್ರತಿಯೊಬ್ಬ ಕ್ರೈಸ್ತ ಪ್ರೀತಿ ಮತ್ತು ಸೇವೆಯನ್ನು ವ್ಯಕ್ತಪಡಿಸುತ್ತಾನೆ. ಕೆಲವು ಜನರು ಕ್ರಿಸ್ತನ ಅನುಯಾಯಿಗಳನ್ನು ಅನುಮಾನದಿಂದ ನೋಡಲು ಮೋಸಗಾರರಾಗಿ ದಾರಿ ತಪ್ಪಿಸುತ್ತಾರೆ. ಆದರೆ ಕರ್ತನು ನಮ್ಮನ್ನು ಪ್ರೀತಿಸಿದಂತೆ ನಿಜವಾದ ಕ್ರೈಸ್ತನು ಪ್ರೀತಿಸುತ್ತಾನೆ. ದ್ವೇಷವನ್ನು ಉತ್ತೇಜಿಸುವವರು ಇತರರನ್ನು ನಾಶಮಾಡುವ ಮೊದಲು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅವರಲ್ಲಿ ದೇವರಿಲ್ಲ ಮತ್ತು ಆವರಲ್ಲಿ ಭರವಸೆಯೂ ಇಲ್ಲ.
ಈ ಕ್ರಿಸ್ಮಸ್ ಹಬ್ಬಕ್ಕೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನೀವು ಸಮಾಜಕ್ಕೆ ಮಾಡುವ ಸತ್ಯವನ್ನು ಎತ್ತಿ ಹಿಡಿಯುವ ಸೇವೆಗೆ ಋಣಿಯಾಗಿದ್ದೇನೆ. ನಮ್ಮ ರಕ್ಷಕನಾದ ಯೇಸುವಿನ ಜನನವು ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಒಳ್ಳೆಯತನ ಮತ್ತು ಪ್ರೀತಿಯನ್ನು ತುಂಬಲಿ. ನೆನಪಿಡಿ, ಪ್ರೀತಿ ಮಾತ್ರ ವಿಶ್ವಾಸಾರ್ಹವಾಗಿದೆ. ನೀವು ಪ್ರೀತಿಸಿದಾಗ, ನೀವು ಆಕರ್ಷಕರಾಗುತ್ತೀರಿ. ಈ ಕ್ರಿಸ್ಮಸ್ ನಿಮ್ಮನ್ನು ಪ್ರೀತಿಯ ದ್ಯೋತಕಗಳನ್ನಾಗಿ ಮಾಡಲಿ. ನಿಮಗೆ ಕ್ರಿಸ್ಮಸ್ ಹಬ್ಬದ ಮತ್ತು ಹೊಸ ವರ್ಷ 2023 ಶುಭಾಶಯಗಳು.

ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಕ್ಷೇತ್ರ

ಮೂಡ್ಲಕಟ್ಟೆ ಎಂ ಐ ಟಿ: ಕ್ರಿಸ್ಮಸ್ ಸಂಭ್ರಮಾಚರಣೆ

ಕುಂದಾಪುರ: ಡಿ.21, ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿದ್ಢಾರ್ಥ ಜೆ ಶೆಟ್ಟಿ ಅವರು ಕ್ರಿಸ್ಮಸ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಇಂಜಿನಿಯರಿಂಗ್, ಎಮ್ ಬಿ ಎ, ಬಿಸಿಎ, ಬಿಕಾಂ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ಬಿಸಿಎ ವಿಧ್ಯಾರ್ಥಿ ದಿಶಾಂಕ್ ಸಾಂತಾಕ್ಲಾಸ್ ವೇಷ ಧರಿಸಿ ಸಭಿಕರನ್ನು ರಂಜಿಸಿದರು.  
ಐ ಎಂ ಜೆ ಸಂಸ್ಥೆಗಳ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್, ಎಂ ಐ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ,  ಎಂ ಐ ಟಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫ಼ೆಸರ್ ಜೆನಿಫರ್ ಫ಼್ರೀಡ, ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್, ಐ ಎಂ ಜೆ ಐ ಎಸ್ ಸಿ ಉಪ ಪ್ರಾಂಶುಪಾಲರಾದ ಶ್ರೀಯುತ ಜಯಶೀಲ ಕುಮಾರ್, ಪ್ಲೇಸ್‌ಮೆಂಟ್ ಡೀನ್ ಪ್ರೊ. ಅಮೃತಮಾಲಾ, ಡೀನ್ಸ್, ವಿಭಾಗದ ಮುಖ್ಯಸ್ಥರು, ಸಿಬಂದಿ  ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಥಮ್ ಕಾರ್ಯಕ್ರಮ ನಿರೂಪಿಸಿದರು, ಸ್ವಾಗತಿಸಿ, ಧನ್ಯವಾದ ಸಮರ್ಪಣೆ ಮಾಡಿದರು.

ಮತ ಖರೀದಿಗೆ ಮಹಿಳಾ ಸಂಘದ ಸದಸ್ಯರ ಮಾಹಿತಿ ನೀಡಿ ಅಪಹಾಸ್ಯಕ್ಕೆ ಗುರಿಯಾಗದಿರಿ
ರಾಜಕಾರಣಿ ಕೊಡುವ ಸಾವಿರರೂಗೆ ಸ್ವಾಭಿಮಾನ ಬಲಿಕೊಡದಿರಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಚುನಾವಣೆ ಹತ್ತಿರವಾಗುತ್ತಿದ್ದು, ಕೆಲವು ರಾಜಕೀಯ ಪಕ್ಷಗಳ ಹಣವಂತ ಮುಖಂಡರು ಮತ ಖರೀದಿಗೆ ಬಂದಾಗ ಸ್ವಾಭಿಮಾನ ಬಲಿಕೊಟ್ಟು ಅವರಿಗೆ ಸಂಘದ ಸದಸ್ಯರ ಸಂಖ್ಯೆ, ಮತ್ತಿತರ ಮಾಹಿತಿ ನೀಡಿ ಅಪಹಾಸ್ಯಕ್ಕೆ ಗುರಿಯಾಗದೇ ಬುದ್ದಿಹೇಳಿ ಕಳುಹಿಸಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಸಾಯಿಬಾಬಾ ಮಂದಿರದಲ್ಲಿ ದಕ್ಷಿಣ ಕಸಬಾ ರೇಷ್ಮೆಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಆಶ್ರಯದಲ್ಲಿ 34 ಮಹಿಳಾ ಸಂಘಗಳಿಗೆ 1.75 ಕೋಟಿ ರೂ ಶೂನ್ಯ ಬಡ್ಡಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ, ಡಿಸಿಸಿ ಬ್ಯಾಂಕನ್ನು ಉಳಿಸಿ ಬೆಳೆಸಿರುವವರೂ ನೀವೆ, ನೀವು ಬದುಕು ಕಟ್ಟಿಕೊಳ್ಳಲು ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ಸೌಲಭ್ಯ ನೀಡುತ್ತಿದೆ, ನೀವು ಮತ್ತೊಬ್ಬರ ಬಳಿ ಕೈಚಾಚುವುದು ಬೇಕಾಗಿಲ್ಲ ಎಂದ ಅವರು, ಸ್ವಾವಲಂಬಿ ಬದುಕಿಗೆ ನೆರವಾಗಲು ಬ್ಯಾಂಕ್ ಸದಾ ಸಿದ್ದವಿದೆ ಎಂದು ಭರವಸೆ ನೀಡಿದರು.
ಚುನಾವಣೆ ಹತ್ತಿರವಾಗುತ್ತಿದೆ, ಕೆಲವು ರಾಜಕೀಯ ನಾಯಕರು ಓಟಿಗಾಗಿ ಹಣ, ಆಮಿಷವೊಡ್ಡಿದರೆ ಧಿಕ್ಕರಿಸಿ ಎಂದು ಕಿವಿಮಾತು ಹೇಳಿದ ಅವರು, ಮತ ಮಾರಾಟ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಾಗಿದೆ, ಮಹಿಳೆಯರೇ ಈ ಅನಿಷ್ಟವನ್ನು ತೊಲಗಿಸುವ ಶಕ್ತಿ ಹೊಂದಿದ್ದೀರಿ, ನಿಮ್ಮಿಂದ ಮಾತ್ರ ಪ್ರಜಾತಂತ್ರ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರತಿ ವಾರ ಸಭೆ ಮಾಡಬೇಕು, ಸಂಘದ ಎಲ್ಲಾ ಸದಸ್ಯರೂ ಜವಾಬ್ದಾರಿ ಹೊರಬೇಕು, ಸಾಲದ ಕಂತುಗಳನ್ನು ಸಮರ್ಪಕವಾಗಿ ಪಾವತಿಸುವ ಮೂಲಕ ಬಡ್ಡಿಯಿಂದ ಪಾರಾಗಿ ಅಸಲು ಪಾವತಿಸಿ ಆರ್ಥಿಕವಾಗಿ ಶಕ್ತಿ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿ, ಸಾಲ ಮಾತ್ರವಲ್ಲ, ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿಮ್ಮ ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿಗೆ ಅಥವಾ ಸೊಸೈಟಿಗೆ ಬದಲಿಸಿ, ಅಲ್ಲೇ ಉಳಿತಾಯ ಮಾಡಿ, ನಿಮಗೆ ಮತ್ತಷ್ಟು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಮೀಟರ್ ಬಡ್ಡಿ ಶೋಷಣೆ ತಪ್ಪಿಸಲು ಬ್ಯಾಂಕ್‍ನಿಂದ ಬಡ್ಡಿ ರಹಿತ ಸಾಲ ನೀಡಿದ್ದೇವೆ, ನೀವು ಖಾಸಗಿಯವರಿಗೆ ಸಾಲಕ್ಕೆ ನೀಡುತ್ತಿದ್ದ ಬಡ್ಡಿಯಷ್ಟು ಕಂತು ಪಾವತಿಸಿದರೆ ಸಾಕು ಇಡೀ ನಿಮ್ಮ ಸಾಲ ತೀರುತ್ತದೆ. ಹಾವುದೇ ಕಾರಣಕ್ಕೂ ಖಾಸಗಿಯವರ ಬಳಿ ಸಾಲಕ್ಕೆ ಹೋಗಬೇಡಿ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡಿದರೆ ಹೊಸಬರಿಗೆ ಸಾಲ ಕೊಡಬಹುದು ಎರಡು ಜಿಲ್ಲೆಯಲ್ಲಿ 7 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ, ಸಾಲದ ಹಣ ನೇರ ನಿಮ್ಮ ಉಳಿತಾಯ ಖಾತೆಗೆ ಸಂದಾಯವಾಗುತ್ತದೆ, ಮಧ್ಯವರ್ತಿಗಳ ಹಾವಳಿ ಇಲ್ಲ ನೀವು ಯಾರಿಗೂ ಲಂಚ ನೀಡಬೇಕಾಗಿಲ್ಲ, ಎಟಿಎಂ ಮೂಲಕ ಅಗತ್ಯವಾದಷ್ಟು ಹಣ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಕೊಡುವ ಸಾಲದಿಂದ ಹಸು ಸಾಕಿ, ಇಲ್ಲವೇ ಆದಾಯ ತರುವ ಇತರೆ ಸ್ವಾವಲಂಬಿ ಬದುಕು ಮಾಡಿಕೊಳ್ಳಿ, ಒಟ್ಟಾರೆ ಪಡೆದ ಸಾಲದಿಂದ ನಿಮ್ಮ ಜೀವನ ಹಸನಾಗಬೇಕು, ಸಾಲದ ಹೊರೆಯಿಂದಲೂ ನೀವು ಬಿಡುಗಡೆ ಹೊಂದಬೇಕು ಎಂಬುದೇ ಡಿಸಿಸಿ ಬ್ಯಾಂಕಿನ ಧ್ಯೇಯವಾಗಿದೆ. ಸಾಲ ಪಡೆಯುವುದು ಮಾತ್ರವಲ್ಲ ಬ್ಯಾಂಕಿನಲ್ಲಿ ಉಳಿತಾಯ ಮಾಡಬೇಕು ಬ್ಯಾಂಕ್ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಆರ್ಥಿಕವಾಗಿ ನೀವು ಕುಟುಂಬಕ್ಕೆ ಮತ್ತು ಬ್ಯಾಂಕ್ ಗೆ ಶಕ್ತಿ ತುಂಬಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ವಾಣಿಜ್ಯ ಬ್ಯಾಂಕುಗಳಲ್ಲಿ ನಿಮ್ಮ ಜಮೀನು ಅಡವಿಟ್ಟು ಸಾಲ ಪಡೆಯಬೇಕು, ಆದರೆ ಡಿಸಿಸಿ ಬ್ಯಾಂಕ್ ಯಾವುದೇ ಭದ್ರತೆಯಿಲ್ಲದೇ ಮಹಿಳೆಯರ ಪ್ರಾಮಾಣಿಕತೆಯನ್ನು ನಂಬಿ ಸಾಲ ನೀಡಿದೆ. ಅದೇ ನಂಬಿಕೆ ನೀವು ಉಳಿಸಿಕೊಳ್ಳಿ, ಪಡೆದ ಸಾಲವನ್ನು ಸ್ವಯಂ ಉದ್ಯೋಗಕ್ಕೆ ಬಳಸಿಕೊಳ್ಳಿ, ಆರ್ಥಿಕವಾಗಿ ಸಬಲರಾಗಿ ಚುನಾವಣೆಗಳು ಬಂದಾಗ ಮಹಿಳೆಯರು ಸ್ವಾಭಿಮಾನ ಕಳೆದುಕೊಂಡು ಓಟಿಗಾಗಿ ಹಣಕ್ಕೆ ಕೈಚಾಚಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ನೀಡಿರುವಷ್ಟು ಸಾಲ ದೇಶದ ಯಾವುದೇ ಡಿಸಿಸಿ ಬ್ಯಾಂಕ್ ನೀಡಿಲ್ಲ, ಭದ್ರತೆಯಿಲ್ಲದ ಹಾಗೂ ಬಡ್ಡಿರಹಿತ ಸಾಲ ನೀಡಿದೆ, ತಾಯಂದಿರು ಇದರ ಸದುಪಯೋಗ ಮಾಡಿಕೊಂಡು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ, ಸಾಲದ ಪ್ರಮಾಣ ಹೆಚ್ಚಿಸಲು ಪ್ರಯತ್ನ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ಉಪಾಧ್ಯಕ್ಷ ಶ್ರೀನಿವಾಸಪ್ಪ, ನಿರ್ದೇಶಕರಾದ ದೊಡ್ಡಹಸಾಳ ವೆಂಕಟೇಶಪ್ಪ, ಚಿಕ್ಕಹಸಾಳದ ಶ್ರೀನಿವಾಸಪ್ಪ ಚಿಕ್ಕಹಸಾಳ, ಶ್ರೀರಾಮರೆಡ್ಡಿ, ಈಕಂಬಳ್ಳಿ ನಾರಾಯಣಸ್ವಾಮಿ, ಪದ್ಮಮ್ಮ, ಸೊಸೈಟಿ ಸಿಇಒ ವೆಂಕಟೇಶ್, ಸಿಬ್ಬಂದಿ ಚರಣ್, ಅರುಣ್, ರಾಮಮೂರ್ತಿ ಮತ್ತಿತರರು ಹಾಜರಿದ್ದರು.

:ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರದ ಸಾಯಿಬಾಬಾ ಮಂದಿರದಲ್ಲಿ ದಕ್ಷಿಣ ಕಸಬಾ ರೇಷ್ಮೆಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಆಶ್ರಯದಲ್ಲಿ 34 ಮಹಿಳಾ ಸಂಘಗಳಿಗೆ 1.75 ಕೋಟಿ ರೂ ಶೂನ್ಯ ಬಡ್ಡಿ ಸಾಲವನ್ನು ವಿತರಿಸಿದರು

ಇಂಗ್ಲೀಷ್‍ನಿಂದ ಮಾತ್ರ ವೃತ್ತಿ ಮತ್ತು ಬದುಕಿನಲ್ಲಿ ಯಶಸ್ಸು ಸಾಧ್ಯ ಎಂಬ ಭ್ರಮೆ ಬೇಡ : ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ

ಕೋಲಾರ,ಡಿ.22: ಇಂಗ್ಲೀಷ್‍ನಿಂದ ಮಾತ್ರ ವೃತ್ತಿ ಮತ್ತು ಬದುಕಿನಲ್ಲಿ ಯಶಸ್ಸು ಸಾಧ್ಯ ಎಂಬ ಭ್ರಮೆ ಬೇಡ, ಸಾಧಕ ಮಹನೀಯರೆಲ್ಲರೂ ಕನ್ನಡದಲ್ಲೇ ಮುಂದೆ ಬಂದವರು ಎಂಬುವುದನ್ನು ಮರೆಯಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ ಅವರು ತಿಳಿಸಿದರು.
ಮುಳಬಾಗಿಲು ತಾಲೂಕಿನ ಎಂ.ಅಗ್ರಹಾರ ಗ್ರಾಮದಲ್ಲಿ ದಿಟ್ಟ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಕನ್ನಡ ನಾಡ ಹಬ್ಬ, ಉಚಿತ ಆರೋಗ್ಯ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳ ವಿತರಣೆ ಸಮಾರಂಭವನ್ನು, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಮೇಲೆ ತಂದೆ-ತಾಯಿ ಜವಾಬ್ದಾರಿ ಹೇಗಿದೆಯೋ ಹಾಗೆ ಮುಂದೆ ಮಕ್ಕಳೂ ಸಹ ತಮ್ಮನ್ನು ಸಾಕಿ-ಸಲುಹಿ ವಿದ್ಯಾಭ್ಯಾಸ ನೀಡಿ ಬೆಳೆಸಿದ, ತಂದೆ-ತಾಯಿಯನ್ನು ಕ್ಷೇಮದಿಂದ ನೋಡಿಕೊಳ್ಳುವ ಜವಾಬ್ದಾರಿ, ಮಕ್ಕಳ ಮೇಲೆಯೂ ಇದೆ ಎಂಬುವುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ದಿನನಿತ್ಯದ ಜೀವನದಲ್ಲಿ ಕಲಿಯುವ ಪಾಠ ನಮಗೆ ದಾರಿದೀಪವಾಗುತ್ತದೆ ಅದನ್ನು ಅರಿತು-ಅನುಸರಿಸಿ ಬೆಳೆಯುವವನೇ ಸಾರ್ಥಕತೆಯ ಸಾಧಕನಾಗುತ್ತಾನೆ. ಹಾಗೆಯೇ ತಮಗೆ ಏಕೆ ಕಷ್ಟಗಳ ಎಂಬ ಕೀಳರಿಮೆ ಬೇಡ. ಬದುಕು ಮತ್ತು ವೃತ್ತಿಯಲ್ಲಿ ತಾಳ್ಮೆ, ಶ್ರದ್ಧೆ ಇದ್ದಲ್ಲಿ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಹಾಗೆಯೇ ಇನ್ನೊಬ್ಬ ಮನುಷ್ಯನ ಕಷ್ಟಕ್ಕೆ ಸಕಾಲಕ್ಕೆ ಸ್ಪಂದಿಸುವುದೇ ಮಾನವತೆಯ ಗುಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಚಿಮಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕನ್ನಡ ಪ್ರಾಚೀನ ಭಾಷೆಯಾಗಿದ್ದು ಕನ್ನಡದಲ್ಲಿ ಸಿಕ್ಕಿರುವಷ್ಟು ಜ್ಞಾನಪೀಠ ಪ್ರಶಸ್ತಿಗಳು ಬೇರಾವ ಭಾಷೆಗೆ ದೊರಕದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ, ಸಾಹಿತ್ಯ, ಕಲೆ, ಸಂಸ್ಕøತಿ, ಕವಿಪುಂಗವರು, ಲೇಖಕರು, ಸಾಹಿತಿಗಳು, ಹೋರಾಟಗಾರರು, ಚಿಂತಕರ ಸಂಖ್ಯೆ ಹಾಗೂ ಅವರ ಕ್ಷೇತ್ರದ ಕೊಡುಗೆ ಅಪಾರವಾದದ್ದು ಹಾಗೂ ಸಾಗರದಷ್ಟು ವ್ಯಾಪ್ತಿಯನ್ನು ಹೊಂದಿದೆ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ಮಾತನಾಡಿ, ಗಡಿಭಾಗದಲ್ಲಿ ಸಹಜವೆಂಬಂತೆ ಭಾಷೆ ತೆಲುಗಾದರೂ ಕನ್ನಡದ ಅಸ್ಮಿತೆ-ಅಸ್ತಿತ್ವದ ವಿಚಾರದಲ್ಲಿ ಕನ್ನಡತನವನ್ನು ಇಲ್ಲಿನವರು ಯಾರೂ ಬಿಟ್ಟುಕೊಡಲಾರರು. ಹಾಗೆಯೇ ಕನ್ನಡ ಭಾಷೆ, ಗಡಿ, ಜಲ ವಿಚಾರಕ್ಕೆ ಧಕ್ಕೆ ಬಂದಾಗ ಎಲ್ಲರೂ ಒಂದಾಗುತ್ತಾರೆ ಎಂಬುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ ಮಾತನಾಡಿ, ಕನ್ನಡವು ಮಾತೃ ಭಾಷೆಯಾಗಿ ಪ್ರಥಮ ಆದ್ಯತೆಯಾಗಿರಬೇಕೆ ವಿನ: ಬೇರೆ ಭಾಷೆಯನ್ನು ತೆಗಳುವ, ದ್ವೇಷಿಸುವಂತಾಬಾರದು ಎಂದ ಅವರು, ಗ್ರಾಮೀಣ ಭಾಗದಲ್ಲಿ ಇಂದು ಆಧುನೀಕರಣ ನೆಪದಲ್ಲಿ ಇಂಗ್ಲೀಷ್‍ನ ಬೆನ್ನು ಹತ್ತಿ ನಗರಗಳತ್ತ ವಲಸೆ ಹೋಗುತ್ತಿರುವುದು, ಗ್ರಾಮೀಣ ಶೈಲಿಯ ಬದುಕನ್ನು ಬಿಟ್ಟು ನವ ಜೀವನ ಹೆಸರಿನಲ್ಲಿ ಜೀವನ ಶೈಲಿಯನ್ನು ಬದಲಾಯಿಸುತ್ತಿರುವುದು ಆತಂಕದ ಸಂಗತಿ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ವಿ.ಶ್ಯಾಮೇಗೌಡ ಮಾತನಾಡಿ, ಮುಳಬಾಗಿಲು ತಾಲೂಕು ಸೇರಿದಂತೆ ಕರ್ನಾಟಕದ ಗಡಿಭಾಗದಲ್ಲಿ ಇಂದಿಗೂ ಸಹ ಕನ್ನಡ ತನ್ನ ಕಸ್ತೂರಿ ಕಂಪನ್ನು ಬೀರುತ್ತಿದೆ ಎಂದ ಅವರು, ಕನ್ನಡ ಶಾಲೆಗಳನ್ನು ಬಲಪಡಿಸಿ ಕನ್ನಡದಲ್ಲೇ ವಿದ್ಯಾಭ್ಯಾಸ, ಪರೀಕ್ಷೆ ಹಾಗೂ ವೃತ್ತಿಗೆ ಮೊದಲ ಆದ್ಯತೆ ಆಗಬೇಕೆಂದರು.
ಕಾರ್ಯಕ್ರಮದಲ್ಲಿ ಅಗ್ರಹಾರ ವಿಶ್ವನಾಥ್, ಕೆ.ಬಿ.ನಾರಾಯಣಸ್ವಾಮಿ, ಮಾರಪ್ಪ, ಬಸವರಾಜ, ಮಂಜುನಾಥ್, ರಾಚಣ್ಣ, ಅಂಬರೀಶ್, ಸುಬ್ರಮಣ್ಯಂ, ಗೋಪಾಲರೆಡ್ಡಿ, ರಾಜಶೇಖರ್, ವಂಶೋದಯ ಆಸ್ಪತ್ರೆಯ ಡಾ.ಅರವಿಂದ್, ನಾಗರಾಜ್, ಆನಂದ್, ಹನುಮನಹಳ್ಳಿ ನಾಗರಾಜ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸೀಪೂರು ಗ್ರಾಮದಲ್ಲಿ ರೈತರೊಂದಿಗೆ ಮುಖಾಮುಖಿ ಸಂವಾದ, ರೈತರಿಗೆ ಬೆಳೆ ಸಾಲ ವಿತರಣೆ
ಪ್ರತಿಕುಟುಂಬಕ್ಕೂ ನೆರವು-ಸಾಲ ವಿತರಣೆ ಆಂದೋಲನವಾಗಿಸೋಣ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಸೊಸೈಟಿ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರಹಿಸಿ, ಪ್ರತಿ ಕುಟುಂಬಕ್ಕೂ ನೆರವಾಗುವ ಮೂಲಕ ಸಾಲ ವಿತರಣೆಯನ್ನು ಡಿಸಿಸಿ ಬ್ಯಾಂಕಿನಿಂದ ಆಂದೋಲನವಾಗಿ ನಡೆಸೋಣ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗೋಣ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ತಾಲ್ಲೂಕಿನ ಸೀಪೂರು ಗ್ರಾಮದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳ ಕುರಿತಂತೆ ರೈತರೊಂದಿಗೆ ಮುಖಾಮುಖಿ ಚರ್ಚೆಯಲ್ಲಿ ಭಾಗವಹಿಸಿ, ಸಾಂಕೇತಿಕವಾಗಿ 19 ಲಕ್ಷ ರೂ ಬೆಳೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಮಳೆ ಬಂದಿದೆ, ಕೆಸಿ ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ, ನಿಂತಿದ್ದ ಕೊಳವೆ ಬಾವಿಗಳು ಮರಪೂರ್ಣವಾಗಿವೆ, ಇಂತಹ ಸಂದರ್ಭದಲ್ಲಿ ರೈತರು ಬೆಳೆ ಇಡುವ ತವಕದಲ್ಲಿದ್ದಾರೆ ಆದರೆ ಅವರನ್ನು ಆರ್ಥಿಕ ಸಂಕಷ್ಟ ಕಾಡುತ್ತಿದೆ, ಇಂತಹ ಸಂದರ್ಭದಲ್ಲೇ ಬ್ಯಾಂಕ್ ನೆರವಾಗುವ ಅಗತ್ಯವಿದೆ ಎಂದರು.
ಅರಹಳ್ಳಿ ಸೊಸೈಟಿ 48 ಹಳ್ಳಿಗಳ ವ್ಯಾಪ್ತಿಯನ್ನು ಒಳಗೊಂಡಿದೆ, ಆದರೆ ಈ ಭಾಗದಲ್ಲಿ ಸೊಸೈಟಿಯಿಂದ ಕೇವಲ 400 ಮಂದಿ ರೈತರಿಗೆ ಮಾತ್ರವೇ ಸಾಲ ಸಿಕ್ಕಿದೆ ಎನ್ನುವುದು ವಿಷಾದದ ಸಂಗತಿ, ಸಾಲ ನೀಡಲು ರೈತರನ್ನು ಗುರುತಿಸುವಲ್ಲಿ ಸೊಸೈಟಿ ಸಿಬ್ಬಂದಿ,ಆಡಳಿತ ಮಂಡಳಿ ವಿಫಲವಾಗಿದೆ ಎಂದ ಅವರು, ಜನರ ನೋವು ಅರ್ಥ ಮಾಡಿಕೊಳ್ಳಿ, ಬಡ್ಡಿರಹಿತ ಸಾಲವನ್ನು ಪ್ರತಿ ರೈತರಿಗೂ ಸಿಗುವಂತೆ ಮಾಡಿ ಎಂದು ಸಲಹೆ ನೀಡಿದರು.
ಸಾಲ ವಿತರಣೆಯಲ್ಲಿ ರಾಜಕಾರಣ ಬೆರಸಬೇಡಿ, ಯಾವುದೇ ರೈತನನ್ನು ಸಾಲಕ್ಕಾಗಿ ಅರ್ಜಿ ಪಡೆಯುವಾಗ ನಿಮ್ಮ ಪಕ್ಷ ಯಾವುದು, ಜಾತಿ ಯಾವುದು ಎಂದು ಪ್ರಶ್ನಿಸಬೇಡಿ, ರೈತನಿಗೆ ಸಾಲದ ಅಗತ್ಯತೆ ಕುರಿತು ಮಾತ್ರವೇ ಪರಿಶೀಲನೆ ನಡೆಸಿ, ಬೆಳೆ ಇಡಲು ಸಿದ್ದವಾಗಿರುವ ಪ್ರತಿ ರೈತನಿಗೂ ಸಾಲ ನೀಡುವುದು ಡಿಸಿಸಿ ಬ್ಯಾಂಕಿನ ಆಶಯವಾಗಿದೆ, ಶೇ.50 ರೈತರಿಗಾದರೂ ಶೂನ್ಯ ಬಡ್ಡಿ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ರೈತರನ್ನು ಗುರುತಿಸುವಾಗ ನಿಜವಾದ ರೈತರನ್ನು ಗುರುತಿಸಿ, ರೈತರು, ಸ್ವಾಭಿಮಾನಿಗಳು, ಕೊಟ್ಟ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡುತ್ತಾರೆ, ಯಾವುದೇ ಅನುಮಾನ ಬೇಕಾಗಿಲ್ಲ, ಮಧ್ಯವರ್ತಿಗಳ ಹಾವಳಿ ಇಲ್ಲ, ಯಾರಾದರೂ ಸಾಲ ನೀಡಲು ಲಂಚ ಕೇಳಿದರೆ ಕೂಡಲೇ ನನ್ನ ಗಮನಕ್ಕೆ ತನ್ನಿ, ಸಾಲದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹೋಗುತ್ತದೆ, ಯಾರಿಗೂ ನಯಾಪೈಸೆ ನೀಡಬೇಕಾಗಿಲ್ಲ ಎಂದು ರೈತರಿಗೆ ತಿಳಿಸಿದರು.
ಕೆಲವು ರೈತರು ತಮ್ಮ ಅಳಲು ತೋಡಿಕೊಂಡು ಈವರೆಗೂ ಯಾರೂ ನಿಮಗೆ ಸಾಲ ನೀಡುತ್ತೇವೆ ಬನ್ನಿ ಎಂದು ಕರೆಯಲಿಲ್ಲ, ನೀವು ಶೂನ್ಯ ಬಡ್ಡಿಸಾಲ ನೀಡುವ ಭರವಸೆ ನೀಡುತ್ತಿದ್ದೀರಿ, ಮಳೆಯಾಗಿದ್ದು,ಬೆಳೆ ಇಡಲು ಪರದಾಡುತ್ತಿದ್ದೇವೆ, ಅತಿ ಶೀಘ್ರ ಸಾಲ ಸಿಕ್ಕರೆ ಬೆಳೆ ಬೆಳೆದು ಸಾಲ ತೀರಿಸಿ, ಬದುಕು ಕಟ್ಟಿಕೊಳ್ಳುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸೊಸೈಟಿ ಆಡಳಿತಮಂಡಳಿ, ಸಿಬ್ಬಂದಿಗೆ ರೈತರ ಬಗ್ಗೆ ಆಲಸ್ಯ ಬೇಡ, ಸಹಕಾರಿ ಸಂಸ್ಥೆ ಇರುವುದೇ ರೈತರಿಗೆ ನೆರವಾಗಲು, ಪಕ್ಷ,ಜಾತಿ ಬೇಧವಿಲ್ಲ ಎಂದ ಅವರು, ರೈತರು, ಡಿಸಿಸಿ ಬ್ಯಾಂಕಿನಲ್ಲೇ ವಹಿವಾಟು ನಡೆಸುವ ಮೂಲಕ ಸಾಲ ಸೌಲಭ್ಯ ಪಡೆಯಿರಿ, ಮೀಟರ್ ಬಡ್ಡಿ ದಂಧೆಯ ಶೋಷಣೆಗೆ ಒಳಗಾಗದಿರಿ ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಡಿಸಿಸಿ ಬ್ಯಾಂಕ್ ಉಳಿಸಿ ಬೆಳೆಸುತ್ತಿರುವುದೇ ರೈತರು ಮತ್ತು ಮಹಿಳೆಯರು, ಅವರ ಸ್ವಾವಲಂಬಿ ಬದುಕಿಗೆ ನೆರವಾಗುವ ಸಂಕಲ್ಪದೊದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ, ದೇಶದಲ್ಲೇ ಅತಿ ಹೆಚ್ಚು ರೈತರು, ಮಹಿಳೆಯರಿಗೆ ಸಾಲ ನೀಡಿರುವುದು ಇತಿಹಾಸ ಎಂದ ಅವರು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಲು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತೀರೋ ಅದೇ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಳ್ಳಿ ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುತ್ತೀರಿ, ಬೆಳೆ ಸಾಲವನ್ನು ಪಡೆದು ಬೆಳೆ ಇಡಲು ಖರ್ಚು ಮಾಡಿದರೆ ಸಾಲ ಮರುಪಾವತಿಕಷ್ಟವಾಗಲಾರದು ಎಂದ ಅವರು, ರೈತರು ಸಹಕಾರ ಸಂಘಗಳ ಸದಸ್ಯತ್ವ ಪಡೆಯಿರಿ, ಶೂನ್ಯ ಬಡ್ಡಿ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ, ಡಿಸಿಸಿ ಬ್ಯಾಂಕಿನಲ್ಲೇ ನಿಮ್ಮ ಉಳಿತಾಯದ ಹಣವನ್ನೂ ಇಡಿ ಅದರಿಂದ ಮತ್ತಷ್ಟು ರೈತರಿಗೆ ನೆರವು ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಅರಹಳ್ಳಿ ಸೊಸೈಟಿ ಅಧ್ಯಕ್ಷ ಭಗವಂತಪ್ಪ, ವೆಂಕಟೇಶಪ್ಪ, ಕಾರ್ಯದರ್ಶಿ ಹರೀಶ್, ನಿರ್ದೇಶಕರಾದ ಮುನಿಸ್ವಾಮಿರೆಡ್ಡಿ, ನಾರಾಯಣಸ್ವಾಮಿ, ಪುಸ್ತಿ ನಾರಾಯಣಸ್ವಾಮಿ, ಕೃಷ್ಣಪ್ಪ, ವೆಂಕಟೇಶ್ ಮುಂತಾದವರು ಇದ್ದರು.

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸ್ವರ್ಣ ಪಲ್ಲಕಿ ನಿರ್ಮಾಣಕ್ಕೆ ಚಾಲನೆ

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸ್ವರ್ಣ ಪಲ್ಲಕಿ ನಿರ್ಮಾಣಕ್ಕೆ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು.
ಕುಂದಾಪುರದ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಭರಣ ಜ್ಯುವೆಲ್ಲರ್ಸ್‍ನ ಮಹೇಶ್ ಕಾಮತ್ ಅವರಿಗೆ ಪ್ರಸಾದ ನೀಡಿ ಜವಾಬ್ದಾರಿ ಒಪ್ಪಿಸುವ ಮೂಲಕ ಸ್ವಾಮೀಜಿಯವರು ಚಾಲನೆ ನೀಡಿದರು.
ದೇವಾಲಯದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ಜತೆ ಮೊಕ್ತೇಸರರಾದ ಜನಾರ್ಧನ ಮಲ್ಯ, ತ್ರಿವಿಕ್ರಮ ಪೈ ಹಾಗೂ ಅಕ್ಷಯ ಶೆಣೈ, ಕೆ. ಪದ್ಮನಾಭ ಶೆಣೈ, ಯು. ಅರ್ಜುನ್ ಶೆಣೈ, ವಿನಾಯಕ ಪೈ, ರಮೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ವಿಶ್ವನಾಥ ಎನ್. ಕರಬ-ಶಿಕ್ಷಣ ಜ್ಞಾನ ರಾಜ್ಯ ಪ್ರಶಸ್ತಿ ಪ್ರದಾನ


ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡ ಮಾಡುವ ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಉಡುಪಿ ಜಿಲ್ಲೆಯಿಂದ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರಾಂಶುಪಾಲ ವಿಶ್ವನಾಥ ಎನ್. ಕರಬ, ಕುಂದಾಪುರ ವಲಯದ ಕೋಡಿ ಬ್ಯಾರಿಸ್ ಸಂಸ್ಥೆಯ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ, ಬೈಂದೂರು ವಲಯದ ಆಲೂರು-ಕಳಿಯ ಶ್ರೀಮತಿ ಜಿ. ಹೆಗಡೆ ಬ್ರಹ್ಮಾವರ ವಲಯದ ಮುಂಡಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಹೊಸದುರ್ಗದಲ್ಲಿ ಡಿ. 17 ರಂದು ನಡೆದ ರಾಜ್ಯ ಶೈಕ್ಷಣಿಕ ಸಮಾವೇಶದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.