ವಿಪ್ರ ಸಮಾಜ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ-ರಕ್ತ ದಾನ ಶಿಬಿರ

ವಿಪ್ರ ಸಮಾಜ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಇವರ ಸಹಯೋಗದೊಂದಿಗೆ ಈ ದಿನ ನಮ್ಮ ರಕ್ತ ನಿಧಿ ಕೇಂದ್ರ ದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು. ಇದರ ಉದ್ಘಾಟನೆಯನ್ನು ಸ್ಥಳೀಯ ಶಾಸಕರಾದ ಶ್ರೀ ಕಿರಣಕುಮಾರ್ ಕೊಡ್ಗಿಯವರು ನೆರವೇರಿಸಿದರು ಮತ್ತು ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ D.H.O. ಡಾ. ನಾಗಭೂಶಣ ಉಡುಪ, ರೆಡ್ ಕ್ರಾಸ್ ಪದಾದಿಕಾರಿಗಳಾದ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಸತ್ಯನಾರಾಯಣ ಪುರಾಣಿಕ, ಸುರೇಖ ಪುರಾಣಿಕ ಮತ್ತು ಚಂದ್ರಮೋಹನ ಧನ್ಯ ಉಪಸ್ಥಿತರಿದ್ದರು. ಕಾರ್ಥಿಕ್ ಸ್ಕೇನ್ ಮಾಲೀಕರಾದ ಡಾ. ಬಿ. ವಿ ಉಡುಪರು ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು ಮತ್ತು ಶಾಸಕರನ್ನು ಸನ್ಮಾನಿಸಿದರು. ಕಾರ್ಯದರ್ಶಿ ಸೀತಾರಾಮ ಶೆಟ್ಟಿ ವಂದಿಸಿದರು.

ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣದ ಪ್ರಾರಂಭೋತ್ಸವದ ಉದ್ಘಾಟನೆ

ಕುಂದಾಪುರ, ದಿನಾಂಕ 18/06/2023 ರಂದು ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣದ ಪ್ರಾರಂಭೋತ್ಸವದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಪ್ರಾರಂಭೋತ್ಸವವನ್ನು ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾ. ಸ್ಟಾನಿ ತಾವ್ರೋ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾ. ಅಶ್ವಿನ್ ಆರಾನ್ನಾ, ಪಾಲನಾ ಮಂಡ ಳಿಯ ಉಪಾಧ್ಯಕ್ಷೆ ಶ್ರೀಮತಿ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಶ್ರೀಮತಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಪ್ರೇಮ ಡಿಕುನ್ಹಾ, ಕ್ರೈಸ್ತ ಶಿಕ್ಷಣದ ಸಂಯೋಜಕಿ ಶ್ರೀಮತಿ ವೀಣಾ ಡಿಸೋಜಾ, ಓರ್ವ ಶಿಕ್ಷಕ, ವಿದ್ಯಾರ್ಥಿಗಳ ಪೋಷಕರು ಹಾಗೂ ಇಬ್ಬರು ವಿದ್ಯಾರ್ಥಿಗಳು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾ. ಸ್ಟಾನಿ ತಾವ್ರೋರವರು ಕ್ರೈಸ್ತ ಶಿಕ್ಷಣದ ಜವಾಬ್ದಾರಿಯನ್ನು ಸರ್ವ ಜನರೊಂದಿಗೆ ಹಂಚಿಕೊಳ್ಳುವುದರ ಸಂಕೇತವಾಗಿ ಕ್ರೈಸ್ತ ಶಿಕ್ಷಣದ ಪಠ್ಯ ಪುಸ್ತಕವನ್ನು ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ಶಾಲೆಟ್ ರೆಬೆಲ್ಲೊ ಹಾಗೂ ಕ್ರೈಸ್ತ ಶಿಕ್ಷಣದ ಶಿಕ್ಷಕರಿಗೆ ಹಸ್ತಾಂತರಿಸಿದರು. ಅತೀ ವಂದನೀಯ ಫಾ. ಸ್ಟಾನಿ ತಾವ್ರೋರವರು ಪ್ರಧಾನ ಯಾಜಕರಾಗಿ ಈ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು ಹಾಗೂ ಕ್ರೈಸ್ತ ಶಿಕ್ಷಣದ ಶಿಕ್ಷಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸಂತ ಮೇರಿ ಪ ಪೂ ಕಾಲೇಜಿನಲ್ಲಿ  ಪ್ರಸಕ್ತ ಶೈಕ್ಷಣಿಕ ವರ್ಷದ ಉದ್ಘಾಟನೆ ಹಾಗೂ ಬೋಧಕೇತರ ನಿವ್ರತ್ತ ಸಿಬಂದ್ದಿಗೆ ಬೀಳ್ಕೊಡುಗೆ

ಕುಂದಾಪುರ, 17 ಜೂನ್ 2023 ನಗರದ ಸಂತ ಮೇರಿ ಪ ಪೂ ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದ ಸಾಂಕೇತಿಕವಾಗಿ ಉದ್ಘಾಟನೆ ಹಾಗೂ ಕಚೇರಿ ಸಹಾಯಕರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಸಂಚಾಲಕರು ನಡೆಸಿಕೊಟ್ಟರು.

ಸಂತ ಮೇರಿ ಪ.ಪೂ ವಿದ್ಯಾಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಫಾದರ್ ಸ್ಟ್ಯಾನಿ ತಾವ್ರೊ ಇವರು ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು “ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಅತಿ ಮುಖ್ಯ.ಪರಸ್ಪರ ತಮ್ಮನ್ನು ವಿಮರ್ಶಿಸಿಕೊಳ್ಳಬೇಕು.ಶಿಸ್ತು ಜೀವನದ ಅತಿ ಮುಖ್ಯ ಅಂಗ” ಎನ್ನುತ್ತಾ ಸಂಸ್ಥೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸುತ್ತಾ, ಬೋಧಕೇತರ ವರ್ಗದಲ್ಲಿ ಸಹಾಯಕ ಗುಮಾಸ್ತರಾಗಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಮೇಬಲ್ ಡಿಸೋಜಾರವರನ್ನು ಬೀಳ್ಕೊಡುಗೆಗಾಗಿ ಸನ್ಮಾನಿಸಿ, ಅವರ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

    ಈ ಸಂದರ್ಭದಲ್ಲಿ  ಸಂತ ಜೋಸೆಫ ಕಾನ್ವೆಂಟಿನ ಸುಪಿರಿಯರ್ ಸಿಸ್ಟರ್ ಸುಪ್ರಿಯ ಎ. ಸಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಪಿ ಯು ವಿದ್ಯಾರ್ಥಿಗಳಿಗೆ ಅನೇಕ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಬಹುಮಾನಗಳನ್ನು ನೀಡಿ ಹುರಿದುಂಬಿಸಿದರು. ಅವರು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರು ಉತ್ತಮವಾಗಿ ಕಲಿಯಬೇಕು. ಒಬ್ಬರನೊಬ್ಬರು ಗೌರವಿಸಬೇಕು. ತಾವೆಲ್ಲರೂ ತಮ್ಮ ತಮ್ಮ ಏಳಿಗೆಗಾಗಿ ಶ್ರಮಿಸಬೇಕು ಎನ್ನುತ್ತಾ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ  ವಿದ್ಯಾರ್ಥಿಗಳ ಹತ್ತನೆಯ ತರಗತಿಯ ಸಾಧನೆಗೆ ಶ್ಲಾಘಿಸಿ ಅತ್ತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾದರ್ ಅಶ್ವಿನ್ ಅರಾನ್ನಾರವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು, ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದವರನ್ನು ಬಹುಮಾನ ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರ್ ರವರು ಉಪಸ್ಥಿತರಿದ್ದು ,ಶುಭ ಹಾರೈಸಿದರು. ಉಪನ್ಯಾಸಕರಾದ ಶರ್ಮಿಳಾ ಮಿನೇಜಸ್ ಮತ್ತು ನಾಗರಾಜ ಶೆಟ್ಟಿ ಕ್ರಮವಾಗಿ ಅತ್ತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳ ಹೆಸರನ್ನು ಹಾಗೂ ಸನ್ಮಾನ ಪತ್ರವನ್ನು ವಾಚಿಸಿದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿನಿ ಕುಮಾರಿ ಆಶಾ ಸ್ವಾಗತಿಸಿದರು. ಕುಮಾರಿ ಅಲ್ವಿಟಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ಕುಮಾರಿ ರಮ್ಯಾ ಧನ್ಯವಾದ ಸಮರ್ಪಿಸಿದರು.ವಿದ್ಯಾರ್ಥಿಗಳ ಮನರಂಜನೆ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಕರ್ಣಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ – ಲಕ್ಷ ಬೆಲೆಯ ಕಂಪ್ಯೂಟರ್ ಲ್ಯಾಬಿಗೆ ಪೀಠೋಪಕರಣ ಕೊಡುಗೆ

ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕವು ಈ ದಿನ ಕರ್ಣಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ – ನೆಂಪು ಇಲ್ಲಿಗೆ ಒಂದು ಲಕ್ಷ ಬೆಲೆಯ ಕಂಪ್ಯೂಟರ್ ಲ್ಯಾಬ್ ನ ಪೀಠೋಪಕರಣ ವನ್ನು ಒದಗಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಉದ್ಘಾಟಿಸಿದರು. ಶಾಲೆಯ ಎಚ್.ಎಮ್. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಪ್ರಾಂಶುಪಾಲರಾದ ರಾಜೀವ ನಾಯ್ಕ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಅಬ್ದುಲ್ ಬಶೀರ್ ಹಾಗೂ ಈ ದೇಣಿಗೆ ನೀಡಿದ ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮ ದಿನಕರ ಶೆಟ್ಟಿ (W/ O Dr. Dinakar Shetty) ಮತ್ತು ಅವರ ಪುತ್ರಿ ಡಾ. ನಿಕಿತ ಶೆಟ್ಟಿ ಉಪಸ್ಥಿತರಿದ್ದರು. ಸುಧಾಕರ ಶೆಟ್ಟಿ ಸ್ವಾಗತಿಸಿದರು. ಕರುಣಾಕರ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠಿತ ಸೇಂಟ್ ಜೋಸೆಫ್ ಸಿಬಿಎಸ್‍ಇ ಶಾಲಾ ಶೈಕ್ಷಣಿಕ 2022- 23 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ

ಬೆಂಗಳೂರು, ಜೂ.17: ರಾಜ್ಯದ ಪ್ರತಿಷ್ಠಿತ ಸೇಂಟ್ ಜೋಸೆಫ್ ಶಾಲೆ ಸಿಬಿಎಸ್‍ಇ ಶಾಲಾ ಶೈಕ್ಷಣಿಕ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭ ಜರುಗಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕ್ರತರಾದ ಮೇಜರ್ ಪ್ರದೀಪ್ ಆರ್ಯ (ಐ ಆರ್ ಎಸ್) ಪ್ರಸ್ತುತ ಕಮಿಷನರ್ ಆದಾಯ ಇಲಾಖೆ ಬೆಂಗಳೂರು,ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. “ಸಾಧನೆಗೆ ವೈಫಲ್ಯಗಳು ಮುಖ್ಯವಲ್ಲ, ಗೆಲ್ಲುವ ಗುರಿ ಮುಖ್ಯ” ಇದಕ್ಕೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನ ಬೇಕು ಎನ್ನುವ ಮೂಲಕ ಪ್ರದೀಪ್ ಆರ್ಯರವರು ತಮ್ಮ
ಬದುಕಿನ ಅನುಭವ ಹಾಗೂ ಸಾಧನೆ ಕುರಿತು ಮೌಲ್ಯಯುತ ಮಾತುಗಳನ್ನು ಹಂಚಿಕೊಂಡರು.

ಕಾರ್ಯಕ್ರಮ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಫಾ|| ರೋಹನ್ ಡಿ’ ಅಲ್ಮೇಡಾ ಎಸ್‍ಜೆ ರವರು ಸಾಧಕರ ಸಾಲಿನಲ್ಲಿ ಗುರುತಿಸಲ್ಪಡುವ ಮೇಜರ್ ಆರ್ಯ ರವರ ಸಾಧನೆಗಳು ಭವಿಷ್ಯತ್‍ನಲ್ಲಿ ಯುವ ಪೀಳಿಗೆಯನ್ನು ಪ್ರೇರೇಪಿಸುವಲ್ಲಿ ಸಹಕಾರಿಯಾಗುವಂತವು, ಎಂದು ಹೇಳುವ ಮೂಲಕ, ಸಾಧನೆಗೆ ಪ್ರತಿಯೊಬ್ಬರು ಅಳವಡಿಕೊಳ್ಳಬೇಕಾದ ಗುಣಗಳ ಬಗ್ಗೆ ತಿಳಿಸಿಕೊಟ್ಟರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಜೊತೆಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಶಾಲೆಯ ಮುಖ್ಯಸ್ಥರಾದ ರೆವರೆಂಡ್ ಫಾ|| ಜೋಸೆಫ್ ಡಿಸೋಜ ಎಸ್‍ಜೆ, ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ ಜೋಸೆಫ್, ಸೇಂಟ್ ಜೋಸೆಫ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿನೋದ್ ಅಮೃತ್‍ರಾಜ್, ಶಾಲೆಯ ಸಂಯೋಜಕರು ಮತ್ತು ಪೋಷಕ ಶಿಕ್ಷಕರ ಸಭೆಯ ಉಪಾಧ್ಯಾಕ್ಷರಾದ ಕಮಲ್ ಗೋವಿಂದ್, ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಸಮಸ್ಯೆ ಉಂಟಾಗುವ ಮೊದಲೇ ಕ್ರಮದ ಜವಾಬ್ದಾರಿ ಸರಕಾರದ್ದು’’ ನಮ್ಮ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ :ಸಚಿವ ಮಂಕಾಳ ಎಸ್ ವೈದ್ಯ

ಮಂಗಳೂರು, ಜೂ.17: ಇಂದು ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಸಚಿವ ಮತ್ತು ಭಟ್ಕಳ ಶಾಸಕರಾದ ಮಂಕಾಳ ಎಸ್ ವೈದ್ಯ ಮಂಗಳೂರಿಗೆ ಬಂದಿದ್ದರು. “ಸಮಸ್ಯೆ ಉಂಟಾಗುವ ಮೊದಲೇ ಕ್ರಮ ಕೈಗೊಳ್ಳಬೇಕಾದುದು ಸರಕಾರದ ಜವಾಬ್ದಾರಿ’’ ನಮ್ಮ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ ಎಂದರು. ಮೀನುಗಾರರ ಸಮಸ್ಯೆಗಳು, ಕಡಲ್ಕೊರೆತ, ಡಿಸೆಲ್ ಸಬ್ಸಿಡಿ ಇತ್ಯಾದಿ ಬಗ್ಗೆ ಕಾಳಜಿಯಿಂದ ಮಾತನಾಡಿದ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಇದಕ್ಕೆ ಅಧಿಕಾರಶಾಹಿ ಹೇಗೆ ಸ್ಪಂದಿಸಬಲ್ಲುದು ಕಾದು ನೋಡಬೇಕು.

2013 ರ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನೆನಪು. ಕೊಂಕಣಿ ಅಕಾಡೆಮಿಯ ಅಂದಿನ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ರವರ ಮುತುವರ್ಜಿಯಿಂದ ಮಂಗಳೂರು ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ ಮಂಜೂರಾತಿ ನೀಡಿತ್ತು. ಕುಲಪತಿ ಡಾ. ಭೈರಪ್ಪ ಪೀಠ ಉದ್ಘಾಟನೆ ಕೂಡಾ ಮಾಡಿಸಿದ್ದರು. ಆದರೆ ಪೀಠಕ್ಕೆ ಘೋಷಿಸಿದ 2 ಕೋಟಿ ಅನುದಾನ ತಾರದೇ ಕೆಲಸಗಳು ಶುರುವಾಗುವಂತಿರಲಿಲ್ಲ. ಸರಕಾರದಿಂದ ಹೊಸ ಘೋಷಣೆಗಳನ್ನು ಮಾಡಿಸಬಹುದು. ಆದರೆ ಅನುದಾನ ತರುವುದು ಸಮುದ್ರ ಮಂಥನ ಮಾಡಿದಷ್ಟೇ ಕಷ್ಟದ ಕೆಲಸ.

ಇಂತಹ ಹೊತ್ತಿನಲ್ಲಿ ಆಪದ್ಭಾಂದವನಂತೆ ದೊರೆತವರೇ ಈ ವೈದ್ಯರು. ಉತ್ತರ ಕನ್ನಡದಲ್ಲಿ ಕೊಂಕಣಿ ಅಕಾಡೆಮಿ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳಿಗಾಗಿ ಹಲವಾರು ಸಲ ಅವರನ್ನು ಭೇಟಿಯಾದ ಕಾರಣಕ್ಕೆ ಅವರಿಗೆ ನಮ್ಮ ತಂಡದ ಪರಿಚಯವಿತ್ತು. ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗಿ ಚರ್ಚಿಸಲಾಗಿ ನೇರವಾಗಿ ಸಿ. ಎಮ್. ಬಳಿ ಕರೆದುಕೊಂಡು ಹೋಗಿ ಹೂ ಎತ್ತಿದಷ್ಟೇ ಸಲೀಸಾಗಿ 2 ಕೋಟಿ ಮಂಜೂರು ಮಾಡಿಸಲು ಸಹಕರಿಸಿದ್ದರು. ನಂತರ ಸರಕಾರಿ ಔಪಚಾರಿಕತೆಗಳು ಮುಗಿದು ಆರ್ಥಿಕ ವರ್ಷ ಮುಗಿಯುವುದರೊಳಗೆ ಚೆಕ್ ದೊರೆತಿತ್ತು.

ಸಹಜ ಮಾನವ ಕಾಳಜಿ ಇರುವ ವ್ಯಕ್ತಿಗಳು ಅಧಿಕಾರದಲ್ಲಿರುವಾಗ ಅವರಿಗೆ ಇದೆಲ್ಲಾ ಸಲೀಸು. ಏಕೆಂದರೆ ಇದೇ ಕೆಲಸಕ್ಕಾಗಿ ಅವರ ಆಯ್ಕೆಯಾಗಿದೆ ಎಂಬುದು ಅವರ ಗಮನದಲ್ಲಿರುತ್ತದೆ. ಕಾಂಗ್ರೆಸಿನ ಪಂಚ ಗ್ಯಾರಂಟಿಗಳು ಇದೇ ಮಾನವೀಯ ಅಂತ:ಕರಣದ ಉತ್ಪನ್ನಗಳು. ಇಂದು ಮಾಂಕಾಳ ವೈದ್ಯರು ಮಂಗಳೂರಿಗೆ ಬಂದ ಬಗ್ಗೆ ಕೇಳಿದಾಗ ಇದೆಲ್ಲಾ ನೆನಪಾಯಿತು.

“ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕು”


ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ “ದೇಶ ಪ್ರೇಮ”ದ ಸ್ಫೂರ್ತಿ ಕಡಿಮೆಯಾಗುತ್ತಾ ಬರುತ್ತಿದೆಯೋ ಎಂಬ ಕಾಳಜಿ ಸಹಜವಾದರೂ ಆಸಕ್ತ ಪ್ರಜೆಗಳು ತಮ್ಮ ವೃತ್ತಿ ಪ್ರವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿ ಇತರರಿಗೆ ಮಾದರಿಯಾದರೆ ಸಹಜವಾಗಿ ಅವರಿಂದ ಪ್ರೇರಣೆ ಪಡೆದವರು “ದೇಶ ಪ್ರೇಮಿ”ಗಳಾಗುತ್ತಾರೆ. ನಮ್ಮ ದೇಶದ ಸಂಸ್ಕøತಿ, ಕೌಶಲ್ಯಗಳನ್ನು ನಾಶ ಮಾಡಲು ತುಂಬ ಆಕ್ರಮಣಕಾರರು ಪ್ರಯತ್ನ ಪಟ್ಟರೂ ಆಗಲಿಲ್ಲ. ಅಲೆಕ್ಸಾಂಡರ್ ಕಥೆ ಅದಕ್ಕೆ ತಕ್ಕ ಉದಾಹರಣೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಆಕ್ರಮಣಗಾರರನ್ನು ಪರಿಚಯಿಸಿದಷ್ಟು ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಮಕ್ಕಳಿಗೆ ಪರಿಚಯಿಸಲಿಲ್ಲ. ನಮ್ಮದೇ ಪರಿಸರದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ತಿಳಿದಿಲ್ಲ. ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕೇ ಹೊರತು ಯಾರ ಒತ್ತಡದಿಂದಲ್ಲ. ಎಂದು ಸ್ವರಾಜ್ಯ 75 ಸಂಘಟನೆಯ ಸ್ಥಾಪಕ ಪ್ರದೀಪ್ ಪೂಜಾರಿ ಬಸ್ರೂರು ಹೇಳಿದರು.
ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ದೇಶ ಪ್ರೇಮ” ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು.
ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರಿದ್ದು 56 ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿದ್ದೇವೆ. 24 ಮನೆಗಳಿಗೆ “ಸ್ವಾತಂತ್ರ್ಯ ಹೋರಾಟಗಾರರ ಮನೆ” ಎಂದು ನಾಮ ಫಲಕ ಹಾಕಿದ್ದೇವೆ. ಆದರೆ ನಾವು ಮಾಡಿದ ಶೋಧನೆ, ವಿಷಯ ಸಂಗ್ರಹ, ಶ್ರಮಕ್ಕೆ ನಿರೀಕ್ಷಿತ ಬೆಂಬಲ ಸಂಬಂಧಪಟ್ಟವರಿಂದ ಸಿಗದಿರುವುದು ಬೇಸರವೆನಿಸುತ್ತದೆ” ಎಂದು ಅವರು ಹೇಳಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಸ್. ಸದಾನಂದ ಚಾತ್ರ ಅವರು ಪ್ರದೀಪ್ ಪೂಜಾರಿ ಬಸ್ರೂರು ಅವರನ್ನು ಗೌರವಿಸಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಯು.ಎಸ್.ಶೆಣೈ ಅತಿಥಿಯನ್ನು ಪರಿಚಯಿಸಿದರು. ಡಾ. ವಿಶ್ವೇಶ್ವರ, ಕೆ.ಪಿ.ಭಟ್, ಶ್ರೀಮತಿ ಶೋಭಾ ಭಟ್, ಮಹೇಂದ್ರ ಶೆಟ್ಟಿ ವಿಚಾರ ವಿನಿಮಯದಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಸ್ವಾಗತಿಸಿದರು. ಡಾ| ಉತ್ತಮ ಕುಮಾರ್ ಶೆಟ್ಟಿ ವಂದಿಸಿದರು.

ಭಾವಚಿತ್ರ ಮತ್ತು ವಿಳಾಸ ಸಾಕ್ಷದ ದಾಖಲೆ ಇದ್ದರೆ ಶಕ್ತಿ ಯೋಜನೆಯಲ್ಲಿ ಪಯಣಿಸಬಹುದು – ಬ್ಲಾಕ್ ಕಾಂಗ್ರೆಸ್


ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಒಂದು ವಾರದ ಸಂಚಾರ ಯಶಸ್ಸಿನಿಂದ ಕೂಡಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಯಣಿಸಿದ್ದು ಒಂದು ದಾಖಲೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು. ಅವರು ಇಂದು ಕೆಎಸ್ಆರ್ ಟಿಸಿ ಕುಂದಾಪುರ ವಿಭಾಗಕ್ಕೆ ಭೇಟಿಯನ್ನು ನೀಡಿ, ಮ್ಯಾನೇಜರ್ ರಾಜೇಶ್ ಮೊಗೇರ ಇವರಿಂದ ಒಂದು ವಾರದ ಮಾಹಿತಿಯನ್ನು ಪಡೆದುಕೊಂಡರು. ಕುಂದಾಪುರ ಕೆಎಸ್ಆರ್ ಟಿಸಿ ವಿಭಾಗದಲ್ಲಿ ಈಗಾಗಲೇ 37 ಬಸ್ಸುಗಳು ಸಾಮಾನ್ಯ ಸಾರಿಗೆ, ಗ್ರಾಮಾಂತರ ಸಾರಿಗೆ ಮತ್ತು ನಗರ ಸಾರಿಗೆ ಇಲಾಖೆಯಲ್ಲಿ ಸಂಚರಿಸಿದ್ದು ಮತ್ತೆ ಹೆಚ್ಚಿನ 32 ವೇಗದೂತ ಬಸ್ಸುಗಳು ಶಕ್ತಿ ಯೋಜನೆಯ ಸೇವೆಯಲ್ಲಿವೆ ಇವೆ ಎಂದು ತಿಳಿಸುತ್ತಾ ಮಹಿಳೆಯರು ಉಚಿತ ಪ್ರಯಾಣ ಮಾಡಲು ಭಾವಚಿತ್ರದ ಭಾವಚಿತ್ರ ಮತ್ತು ವಿಳಾಸ ಸಾಕ್ಷದ ದಾಖಲೆ ಇದ್ದರೆ ಶಕ್ತಿ ಯೋಜನೆಯಲ್ಲಿ ಪಯಣಿಸಬಹುದು, ದಾಖಲೆಯು ಮೊಬೈಲಲ್ಲಿ ಇದ್ದರೂ ಉಪಯೋಗಿಸಬಹುದು ಎಂದು ತಿಳಿಸಿದರು.

ಅಧಿಕಾರಿಗಳು ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯಗಳು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮನೆ ನೀಡುವಲ್ಲಿ ಗುಡಿಸಲು ವಾಸಿಗಳು ಹಾಗೂ ವಾಸಿಸಲು ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿರವ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ನೀರು ಪೂರೈಕೆಗೆ ಏನಾದರೂ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆ ಪರಿಹರಿಸಬೇಕು. ಅಗತ್ಯ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಅಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ನಿವಾರಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರ ಕೃಷ್ಣಪ್ಪ, ಕಾರ್ಯಪಾಲಕ ಸಹಾಯಕ ಎಂಜಿನಿಯರ್ ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕ ರಾಮಪ್ಪ ಇದ್ದರು.