

ಶ್ರೀನಿವಾಸಪುರ : ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ ಶೇ.40 ಮತ್ತು ಪ.ಜಾತಿ, ಪ.ಪಂಗಡ ರೈತರಿಗೆ ಶೇ.50 ರಷ್ಟು ಸಹಾಯಧನ ಸರ್ಕಾರದಿಂದ ನೀಡುತ್ತಿದ್ದು, 2023-24 ರಿಂದ 2025-26 ರವರೆಗೆ ಕೃಷಿ ಇಲಾಖೆಯ ಸಹಾಯಧನದಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಿಗೆ ಕೆಲವು ರೈತರು ತಂತಿ ಬೇಲಿ ನಿರ್ಮಿಸಿಕೊಂಡಿರುವುದಿಲ್ಲ ಮತ್ತು ಕೃಷಿ ಹೊಂಡದ ಬಳಿ ಅಪಾಯದ ಸೂಚನಾ ಫಲಕವನ್ನು ಹಾಕಿರುವುದಿಲ್ಲ. ಕೂಡಲೇ ರೈತರು ತಂತಿಬೇಲಿಯೊಂದಿಗೆ ಅಪಾಯದ ಸೂಚನಾ ಫಲಕವನ್ನು ಕೃಷಿ ಹೊಂಡಗಳಿಗೆ ಅಳವಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್.ಎಚ್.ಎಂ ತಿಳಿಸಿದರು.
ಸರ್ಕಾರದಿಂದ ಅನುಷ್ಟಾನ ಮಾಡುತ್ತಿರುವ ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿರ್ಮಾಣ ಮಾಡುವುದನ್ನು ಕಡ್ಡಾಯ ಮಾಡಿದ್ದು, ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ ಹಾಗೂ ಕೃಷಿ ಹೊಂಡಕ್ಕೆ ತಂತಿಬೇಲಿ ನಿರ್ಮಾಣ ಮಾಡಿದ ನಂತರವಷ್ಟೇಪೂರ್ಣ ಪ್ರಮಾಣದ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ, ಈ ಹಿಂದೆ ನಿರ್ಮಾಣ ಮಾಡಿರುವ ಕೃಷಿ ಹೊಂಡಕ್ಕೆ ತಂತಿ ಬೇಲಿ ಆಳವಡಿಸಿ ಜನರ ಹಾಗೂ ಜಾನುವಾರು ಸುರಕ್ಷತೆ ಕಾಪಾಡಬೇಕೆಂದು ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಕೃಷಿ ಹೊಂಡಗಳನ್ನು ನರೇಗಾ, ಕೃಷಿ ಭಾಗ್ಯ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಗಳಲ್ಲಿ ಹಾಗೂ ಕೆಲವು ರೈತರು ಸ್ವಂತವಾಗಿ ನಿರ್ಮಿಸಿಕೊಂಡಿದ್ದಾರೆ ಆ ರೈತರು ಸಹಾ ಕೃಷಿ ಹೊಂಡಗಳಿಗೆ ತಂತಿಬೇಲಿಯನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕು, ನಿರ್ಮಾಣ ಮಾಡದಿದ್ದಲ್ಲಿ ಆಗುವ ಪ್ರಾಣ ಹಾನಿಗಳಿಗೆ ರೈತ ಫಲಾನುಭವಿಗಳೇ ಸಂಪೂರ್ಣ ಜವಬ್ದಾರರಾಗಿರುತ್ತಾರೆಂದು ಎಚ್ಚರಿಕೆ ನೀಡಿದರು.

