

ಉತ್ತರ ಕನ್ನಡ, ಅ. 31: ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿ ಮೀನಿನ ವಿಷಾನಿಲಕ್ಕೆ ಸಿಲುಕಿ ಮೂವರು ಮೀನುಗಾರರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಬೋಟ್ನ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸುವ ವೇಳೆ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ ಒಡಿಶಾ ಮೂಲದ ಇಬ್ಬರು ಮೀನುಗಾರರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.
ಘಟನೆಯಲ್ಲಿ ಇಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಬೇಲೆಕೇರಿ ಮೂಲದ ‘ಮೂಕಾಂಬಿಕಾ’ ಮೀನುಗಾರಿಕಾ ಬೋಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಮನ್ ಜಾತಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದ ಮೀನುಗಾರರು, ಬೋಟ್ನ ಶೇಖರಣಾ ಘಟಕದಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಘಟಕದೊಳಗೆ ಸಂಗ್ರಹವಾಗಿದ್ದ ವಿಷಾನಿಲ ಹೊರಹೊಮ್ಮಿದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಾನಿಲಕ್ಕೆ ಸಿಲುಕಿದ ಒಡಿಶಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಮೃತಪಟ್ಟಿದ್ದಾರೆ. ಇದೇ ಘಟನೆಯಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡ ಲಾಲಿಂದರ ಧ್ರುವ (41) ಅವರನ್ನು ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೇಳೆ ಮತ್ತಿಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ತದಡಿ ದುರಂತದ ಬೆನ್ನಲ್ಲೇ ಮರುಕಳಿಸಿದ ದುರಂತ:
ಮೂರು ದಿನಗಳ ಹಿಂದಷ್ಟೇ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಚಮನ್ ಮೀನಿನಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಸಿಲುಕಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಆ ದುರಂತದ ಬೆನ್ನಲ್ಲೇ ಮುದಗಾ ಬಂದರಿನಲ್ಲಿ ಮತ್ತೊಮ್ಮೆ ಇದೇ ರೀತಿಯ ಅವಘಡ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.ಬೋಟ್ಗಳ ಮೀನು ಸಂಗ್ರಹಣಾ ಘಟಕಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿಷಾನಿಲದ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ಸತತವಾಗಿ ಸಂಭವಿಸುತ್ತಿರುವ ಈ ಘಟನೆಗ ಪುನಃ ಎಚ್ಚರಿಸಿದೆ.

