

ಮಂಗಳೂರು:ಬೋಳಾರ ಸೈಂಟ್ ಆನ್ಸ್ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವು ಕ್ರೀಡಾಸ್ಫೂರ್ತಿ, ಸಂಭ್ರಮ ಹಾಗೂ ಉತ್ಸಾಹದ ವಾತಾವರಣದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಮಧುರವಾದ ವಾದ್ಯವೃಂದದ ನಾದದೊಂದಿಗೆ ಶಾಲೆಯ ನಾಲ್ಕು ತಂಡಗಳಾದ ಸತ್ಯ, ಶಾಂತಿ, ನೀತಿ ಮತ್ತು ದಯಾ ತಂಡಗಳ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು. ತಂಡಗಳ ಶಿಸ್ತು, ಸಮನ್ವಯ ಹಾಗೂ ಏಕಾಗ್ರತೆ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಆನ್ಸ್ ಸಮೂಹ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾದ ಭಗಿನಿ ಮಾರಿ ಇವೆಲಿನ್ ಎ.ಸಿ. ಅವರು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ರಾಜ್ಯಮಟ್ಟದ ಕ್ರೀಡಾಪಟು ಮಿತಾ ಶ್ರೀ ಕುಲಾಲ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಮಿತಾ ಶ್ರೀ ಕುಲಾಲ್ ಅವರು ಕ್ರೀಡೆಯ ಮಹತ್ವವನ್ನು ವಿವರಿಸುತ್ತಾ, ಕ್ರೀಡೆಯು ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ತಾಳ್ಮೆ, ನಾಯಕತ್ವ ಹಾಗೂ ತಂಡದ ಮನೋಭಾವವನ್ನು ಬೆಳೆಸುತ್ತದೆ ಎಂದರು. ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ನಿರಂತರ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಸಾಧನೆಯ ಗುರಿಯನ್ನು ತಲುಪುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಭಗಿನಿ ಮಾರಿ ಇವೆಲಿನ್ ಎ.ಸಿ. ಅವರು, ಶಿಕ್ಷಣದೊಂದಿಗೆ ಕ್ರೀಡೆಗೂ ಸಮಾನ ಆದ್ಯತೆ ನೀಡುವುದು ಅತ್ಯಗತ್ಯ ಎಂದು ತಿಳಿಸಿದರು. ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಗೆಲುವು ಸಾಧಿಸುವುದೊಂದೇ ಕ್ರೀಡೆಯ ಗುರಿಯಲ್ಲ; ಶಿಸ್ತು, ಸಮಯಪ್ರಜ್ಞೆ, ಪರಸ್ಪರ ಗೌರವ, ಸಹಕಾರ ಹಾಗೂ ಸೋಲನ್ನು ಮೆಟ್ಟಿನಿಂತು ಮುನ್ನಡೆಯುವ ಮನೋಬಲವನ್ನು ಬೆಳೆಸಿಕೊಳ್ಳುವುದೇ ಕ್ರೀಡೆಯ ನಿಜವಾದ ಆಶಯವಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶಿಷ್ಟ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕ್ರೀಡೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದರೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕ್ರೀಡಾಕೂಟದ ಅಂಗವಾಗಿ ಕ್ರೀಡಾ ಪ್ರತಿಜ್ಞೆ, ಕ್ರೀಡಾಜ್ಯೋತಿಯ ಮೆರವಣಿಗೆ ಹಾಗೂ ಬಿಳಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲಾಯಿತು. ವಿದ್ಯಾರ್ಥಿಗಳ ಆಕರ್ಷಕ ಲೈವ್ ಪಿರಮಿಡ್ ಪ್ರದರ್ಶನವು ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು.
ಈ ಸಂದರ್ಭದಲ್ಲಿ ಕುಸ್ತಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಾಲೆಯ ವಿದ್ಯಾರ್ಥಿ ತನ್ಮಯ್ ಸುವರ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೇಂಟ್ ಆನ್ಸ್ ಕಾನ್ವೆಂಟ್ ಮತ್ತು ಆಶಾ ನಿಕೇತನ ಕಾನ್ವೆಂಟ್ನ ಧರ್ಮಭಗಿನಿಯರು, ಸಂತ ಆನ್ಸ್ ಕ್ಯಾಂಪಸ್ನ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಭಗಿನಿ ಆನೆಟ್ ಎ.ಸಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಶಿಕ್ಷಕಿ ಐರಲ್ ಲೋಬೊ ಅಭಿನಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ವೀಣಾ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸಾರಾ ನತಾಶ ವೇಗಸ್ ಸ್ವಾಗತಿಸಿದರು. ಶಿಕ್ಷಕಿ ಅಂಕಿತಾ ಧನ್ಯವಾದ ಸಮರ್ಪಿಸಿದರು.





















