
ಊರಲ್ಲೇ ಇದ್ದು ಅಪರೂಪದ ವ್ಯವಸ್ಥೆ ಕಟ್ಟಿದ ಮಹಾ ಸಾಧಕ ಡಾ. ರಾಜೇಶ್ ಬಾಯರಿ: ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ
ಯಾವುದೇ ಜಾಹೀರಾತಿಲ್ಲದೆ, ಕೇವಲ ಬಾಯಿಮಾತಿನ ಪ್ರಚಾರದಿಂದಲೇ ದೇಶ-ವಿದೇಶಗಳ ರೋಗಿಗಳನ್ನು ಆಕರ್ಷಿಸುತ್ತಿರುವ ಸಂಸ್ಥೆ

ಕುಂದಾಪುರ, ಜೂನ್ 5, 2026: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಾವಳಿಯ ಹೆಮ್ಮೆಯ ಆಯುರ್ವೇದ ಸಂಸ್ಥೆಯಾದ ಕುಂದಾಪುರದ ಆಲೂರು ತಾಲೂಕಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಹಸಿರು ಕ್ರಾಂತಿಯೊಂದಿಗೆ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ಹಾಗೂ ಮುಂದಿನ ಪೀಳಿಗೆಗೆ ಆಯುರ್ವೇದ ಪರಂಪರೆಯನ್ನು ದಾಟಿಸುವ ಉದಾತ್ತ ಉದ್ದೇಶದಿಂದ ನಿರ್ಮಿಸಲಾದ, 250ಕ್ಕೂ ಹೆಚ್ಚು ಅಪರೂಪದ ಪ್ರಬೇಧದ ಗಿಡಮೂಲಿಕೆಗಳನ್ನೊಳಗೊಂಡ ಚಿತ್ರಕೂಟ ಔಷಧೀಯ ಸಸ್ಯಗಳ ಉದ್ಯಾನವನ (ಔಷಧಿ ವನ) ಮತ್ತು ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬರಿಗಾಲ ಸಂತನೆಂದೇ ಖ್ಯಾತಿ ಹೊಂದಿರುವ ಶ್ರೀ ಗುರುರಾಜ ಗಂಟಿಹೊಳೆ ಅವರು ಈ ಅತ್ಯಪೂರ್ವ ಔಷಧಿ ವನವನ್ನು ಉದ್ಘಾಟಿಸಿ, ಚಿತ್ರಕೂಟ ಸಂಸ್ಥೆಯ ಪರಿಸರ ಸ್ನೇಹಿ ಹೆಜ್ಜೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಾಮಾನ್ಯವಾಗಿ ಪುಸ್ತಕದಲ್ಲಿ ಓದಿದ ಹಾಗೆ ಎರಡು ಮಾದರಿ ಇರುತ್ತದೆ. ಒಂದು, ಹಿಮಾಲಯ ನೋಡಲು ಅಲ್ಲಿಗೆ ಹೋಗುವುದು. ಇನ್ನೊಂದು, ಹಿಮಾಲಯವನ್ನೇ ತನ್ನ ಬಳಿಗೆ ಕರೆಸುವುದು. ಚಿತ್ರಕೂಟದ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ ಅವರು ಎರಡನೇ ಮಾದರಿಯನ್ನು ಆರಿಸಿಕೊಂಡಿದ್ದಾರೆ. ಸ್ವಂತ ಊರಿನಲ್ಲೇ ಉಳಿದು, ಸ್ಥಳೀಯ ಸಂಪನ್ಮೂಲ ಮತ್ತು ಪ್ರಕೃತಿಯನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲೂ ಜಾಗತಿಕ ಮಟ್ಟದ ಅದ್ಭುತ ಸಾಧನೆ ಮಾಡಬಹುದು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಚಿತ್ರಕೂಟ ಆಯುರ್ವೇದ ಸಂಸ್ಥೆಯೇ ಅತ್ಯುತ್ತಮ ಉದಾಹರಣೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ವೈದ್ಯರು ಇಲ್ಲಿ ನಿರ್ಮಿಸಿರುವ ಚಿಕಿತ್ಸಾ ವ್ಯವಸ್ಥೆ ಮತ್ತು ದಿವ್ಯ ಪರಿಸರವನ್ನು ಕಂಡು ನಮಗೆ ಹತ್ತು ಪಟ್ಟು ಹೆಮ್ಮೆಯಾಗುತ್ತಿದೆ. ಇದೊಂದು ಅದ್ಭುತ ಮಾದರಿಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳೆಲ್ಲರೂ ಇದೇ ಗ್ರಾಮೀಣ ಪ್ರದೇಶದವರಾಗಿದ್ದು, ರೋಗಿಗಳೊಂದಿಗೆ ಅತ್ಯಂತ ಸೂಕ್ಷ್ಮವಾಗಿ, ಪ್ರೀತಿಯಿಂದ ಮಾತನಾಡಿ ಚಿಕಿತ್ಸೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಯಾವುದೇ ದೊಡ್ಡ ಜಾಹೀರಾತುಗಳ ಆಡಂಬರವಿಲ್ಲದೆ, ಕೇವಲ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಬಾಯಿಮಾತಿನ ಪ್ರಚಾರದಿಂದಲೇ ಇಂದು ದೇಶ-ವಿದೇಶಗಳಿಂದ ರೋಗಿಗಳು ಈ ಗ್ರಾಮೀಣ ಭಾಗದ ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ” ಎಂದು ಶಾಸಕರು ಮೆಚ್ಚುಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ದಿಲೀಪ್ ಕುಮಾರ್, ಖ್ಯಾತ ವೈದ್ಯ ಅತುಲ್ ಕುಮಾರ್ ಶೆಟ್ಟಿ, ಕಾಳಿಕಾಂಬ ದೇವಸ್ಥಾನ ಮೊಕ್ತೇಸರರು ಚಂದ್ರಯ್ಯ ಆಚಾರ್ಯ, ಚಿತ್ರಕೂಟ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ ಮತ್ತು ಡಾ. ಅನುಲೇಖಾ ಬಾಯರಿ ಉಪಸ್ಥಿತರಿದ್ದರು.
ಅಳಿವಿನ ಅಂಚಿನಲ್ಲಿರುವ ಗಿಡಮೂಲಿಕೆಗಳ ಸಂರಕ್ಷಣೆ
ಬೇರೆಲ್ಲೂ ಸುಲಭವಾಗಿ ಸಿಗದ ಅತ್ಯಪೂರ್ವ ಮತ್ತು ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಕಲೆಹಾಕಿ ಈ ವನದಲ್ಲಿ ಸಂರಕ್ಷಿಸಲಾಗಿದೆ. ಯಾವುದೇ ರಾಸಾಯನಿಕಗಳು ಸೇರದ, ಸಂಪೂರ್ಣ ನೈಸರ್ಗಿಕ ಗಿಡಮೂಲಿಕೆಗಳಿಂದಲೇ ರೋಗಿಗಳಿಗೆ ಶುದ್ಧ ಆಯುರ್ವೇದ ಚಿಕಿತ್ಸೆ ನೀಡಬೇಕು ಮತ್ತು ಇಡೀ ಜಗತ್ತಿಗೆ ಉತ್ತಮ ಆರೋಗ್ಯವನ್ನು ಕರುಣಿಸಬೇಕು ಎನ್ನುವುದು ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಆಯುರ್ವೇದ ತಜ್ಞ ಡಾ. ರಾಜೇಶ್ ಬಾಯರಿ ಅವರ ಕನಸಾಗಿದೆ. ಪ್ರಸ್ತುತ ಬಾಯರಿ ಅವರ ವೈದ್ಯರ ತಂಡವು ಇದೇ ಉದ್ಯಾನವನದ ಹಲವಾರು ಅಮೂಲ್ಯ ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆ. ವನ ಮತ್ತು ಆಯುರ್ವೇದ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಗಾಗಿ 8762220168 ಸಂಪರ್ಕಿಸಿ.



