

ಕುಂದಾಪುರ: ಕರಾವಳಿಯಲ್ಲಿ ಕೋಮು ಸೌಹಾರ್ದತೆ ಶಾಂತಿಗಾಗಿ ಸುನ್ನೀ ಯುವಜನ ಸಂಘದಿಂದ ಕುಂದಾಪುರದಲ್ಲಿ ಸೌಹಾರ್ದ ಸಂಚಾರ ಆರಂಭವಾಯಿತು. ಇದಕ್ಕೆ ಕುಂದಾಪುರ ಜಾಮೀಯ ಮಜೀದಿಯ ಆವರಣದಲ್ಲಿ ಶ್ವೇತ ವರ್ಣದ ಕೊಡೆಗಳನ್ನು ನೀಡುವ ಮುಖಾಂತರ ಚಾಲನೆ ನೀಡಲಾಯಿತು. ಅಲ್ಲಿಂದ ಸೌಹಾರ್ದ ಸಂಚಾರ ಆರಂಭವಾಗಿ ಕಾಲ್ನಡೆಗೆಯಲ್ಲಿ ಕುಂದಾಪುರ ನಗರ ಮುಖಾಂತರ ಶಾಸ್ತ್ರಿ ಸರ್ಕಲ್ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಹಾಧಿ ಮಾತನಾಡಿ “ಪವಿತ್ರ ಕುರಾನ್ ಹಿಂಸೆಯನ್ನು ಆರಾಧಿಸುವುದಿಲ್ಲ. ಪೈಗಂಬರ್ ಜೀವನ ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಿದ ಯಾವ ವ್ಯಕ್ತಿಯೂ ಧರ್ಮದ್ವೇಷ ಮಾಡಲು ಸಾಧ್ಯವಿಲ್ಲ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಪ್ರೀತಿಸು ಎನ್ನುತ್ತದೆಯೇ ಹೊರತು ದ್ವೇಷಿಸಲು ಉಪದೇಶಿಸುವುದಿಲ್ಲ. ಎಲ್ಲಾ ಧರ್ಮದ ಸಾರ ಶಾಂತಿ ಸಾರುವುದೇ ಆಗಿದೆ,” ಎಂದು ತಿಳಿಸಿದರು.
ಬೈಂದೂರು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿಯವರು ಮಾತನಾಡಿ “ನಾನು ಭಾರತೀಯ ಎನ್ನುವ ಧ್ಯೇಯ ವಾಕ್ಯಗಳನ್ನು ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಧರ್ಮಗಳೂ ಒಂದೇ ಎನ್ನುವ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದಲ್ಲಿ ಎಸ್.ವೈ ಎಸ್. ಸಂಘಟನೆಯೊಂದಿಗೆ ಕೈಜೋಡಿಸಬೇಕಾಗಿದೆ. ನಾವೆಲ್ಲರೂ ಜಾತಿ, ಮತ, ಪಂಥಗಳ ಅಂತರಗಳನ್ನು ತೊರೆದು ಸೌಹಾರ್ದತೆಯೊಂದಿಗೆ ಸಾಗೋಣ’ ಎಂದು ತಿಳಿಸಿದರು.
ಸಾಸ್ತಾನ ಸಿರಿಯನ್ ಚರ್ಚಿನ ಧರ್ಮಗುರು ವಂ। ನೋವೆಲ್ ನಾವು ‘ಸಹೋದರತೆ, ನಂಬಿಕೆ, ವಿಶ್ವಾಸಗಳನ್ನು ಗಟ್ಟಿಗೊಳಿಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ರಾವ ರಾಜಕೀಯ ಪಕ್ಷಗಳು, ನಾಯಕರು ನಮ್ಮನ್ನು ಒಂದುಗೂಡಿಸಬೇಕಿತ್ತೋ ಅವೇ ನಮ್ಮನ್ನು ವಿಭಜಿಸಲು ಹುನ್ನಾರ ನಡೆಸುತ್ತಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ” ಎಂದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿ ಅಲ್ಮೇಡಾ ಸಹಬಾಳ್ವೆ ಕುಂದಾಪುರ ಇದರ ರಾಮಕೃಷ್ಣ ಹೇರ್ಳೆ, ಸಿಪಿಐಎಂ ಪಕ್ಷದ ಮುಖಂಡರಾದ ಚಂದ್ರಶೇಖರ ದೇವಾಡಿಗ, ಮಹಾಬಲ, ಕುಂದಾಪುರ ನಗರ ಪ್ರಾಧಿಕಾರ ಅಧ್ಯಕ್ಷರದ ವಿನೋದ್ ಕ್ರಾಸ್ಟೊ
ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಉಪಸ್ಥಿತರಿದ್ದರು
ಎಸ್.ವೈ.ಎಸ್. ರಾಜ್ಯ ಸಮಿತಿಯ ಸದಸ್ಯ ಕೆ.ಎಮ್.ಇಲ್ಯಾಸ್ ಸ್ವಾಗತಿಸಿದರು. ಎಸ್.ವೈ.ಎಸ್. ಸಮಿತಿಯ ರಾಜ್ಯಾಧ್ಯಕ್ಷ ಭಶಿರ್ ಸಾಧಿ ಬೆಂಗಳೂರು ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ್ ಅಬು ಅಹಮ್ಮದ್ ವಂದಿಸಿದರು.











































