
ಸಂವಾದಾತ್ಮಕ ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು ನಿರ್ವಹಣೆ, ಹೈಪರ್-ಪರ್ಸನಲೈಸೇಶನ್ ಮತ್ತು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ ವಿನೂತನ ಸೌಲಭ್ಯ ಬಾಬ್ ವರ್ಲ್ಡ್ 2.0

ಮಂಗಳೂರು, ಸೆಪ್ಟೆಂಬರ್ 15, 2026: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ತನ್ನ ಮುಂದಿನ ಪೀಳಿಗೆಯ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಾಬ್ ವರ್ಲ್ಡ್ 2.0 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ನೂತನ ಆ್ಯಪ್, ಸಂವಾದಾತ್ಮಕ ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು ನಿರ್ವಹಣೆ, ಅತ್ಯಾಧುನಿಕ ಭದ್ರತೆ ಮತ್ತು ಗ್ರಾಹಕರ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ವಿನೂತನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮುಂಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿಎಫ್ಎಫ್) 2026ರಲ್ಲಿ ಸೆಪ್ಟೆಂಬರ್ 11, 2026 ರಂದು ಈ ಅಪ್ಲಿಕೇಶನ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ (ಡಿಎಫ್ಎಸ್) ಕಾರ್ಯದರ್ಶಿ ಶ್ರೀ ಸಂಜಯ್ ಲೋಹಿಯಾ ಅವರಿಗೆ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್ ಹಾಗೂ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಸಮ್ಮುಖದಲ್ಲಿ ಈ ಆ್ಯಪ್ ನ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಬಾಬ್ ವರ್ಲ್ಡ್ 2.0 ಬ್ಯಾಂಕಿನ ಡಿಜಿಟಲ್ ರೂಪಾಂತರದ ಮಹತ್ವದ ಮೈಲಿಗಲ್ಲಾಗಿದೆ. ಎಐ-ಚಾಲಿತ ಈ ಪ್ಲಾಟ್ಫಾರ್ಮ್, ಭವಿಷ್ಯಕ್ಕೆ ಸಜ್ಜಾದ ಬ್ಯಾಂಕಿಂಗ್ ಅನುಭವವನ್ನು ಒದಗಿಸುವುದಲ್ಲದೆ, ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಚಾನಲ್ಗಳಾದ್ಯಂತ ಹಂತಹಂತವಾಗಿ ವಿಸ್ತರಿಸಲಿರುವ ಏಕೀಕೃತ ಓಮ್ನಿ- ಚಾನೆಲ್ ಡಿಜಿಟಲ್ ಬ್ಯಾಂಕಿಂಗ್ ಪರಿಸರ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದೆ. ಆಧುನಿಕ ಮೈಕ್ರೋಸರ್ವಿಸಸ್ ಆಧಾರಿತ ಡಿಜಿಟಲ್ ಆರ್ಕಿಟೆಕ್ಚರ್ನಲ್ಲಿ ನಿರ್ಮಿಸಲಾದ ಈ ಬುದ್ಧಿವಂತ ಹಣಕಾಸು ವ್ಯವಸ್ಥೆಯು, ಹೆಚ್ಚು ಚುರುಕಾದ, ವೈಯಕ್ತಿಕಗೊಳಿಸಿದ ಮತ್ತು ಸುರಕ್ಷಿತ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ.
ಈ ಅಪ್ಲಿಕೇಶನ್ ನಾಲ್ಕು ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದೆ. ಧ್ವನಿ-ಚಾಲಿತ ಪಾವತಿ ಮತ್ತು ನ್ಯಾವಿಗೇಷನ್ ಮೂಲಕ ಗ್ರಾಹಕರು ತಮ್ಮ ವಾಯ್ಸ್ ಕಮಾಂಡ್ ಮೂಲಕವೇ ವಹಿವಾಟುಗಳನ್ನು ಆರಂಭಿಸಬಹುದು. ವೈಯಕ್ತಿಕ ಹಣಕಾಸು ನಿರ್ವಹಣಾ (ಪಿಎಫ್ಎಂ) ಮಾಡ್ಯೂಲ್ ಗ್ರಾಹಕರಿಗೆ ತಮ್ಮ ಒಟ್ಟಾರೆ ಆರ್ಥಿಕ ಸ್ಥಿತಿಗತಿಯನ್ನು ಸಮಗ್ರವಾಗಿ ವೀಕ್ಷಿಸಲು ಮತ್ತು ಆರ್ಥಿಕ ಸಬಲತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಹೈಪರ್-ಪರ್ಸನಲೈಸೇಶನ್ ಮೂಲಕ ಹಿರಿಯ ನಾಗರಿಕರು, ಮಹಿಳೆಯರು, ಅನಿವಾಸಿ ಭಾರತೀಯರು (ಎನ್ ಆರ್ ಐ ಗಳು) ಹಾಗೂ ಯುವ ಪೀಳಿಗೆಯಂತಹ ಪ್ರತಿಯೊಬ್ಬ ಗ್ರಾಹಕರ ವಿಶಿಷ್ಟ ಅಗತ್ಯಗಳಿಗೆ ತಕ್ಕಂತೆ ಪ್ರತ್ಯೇಕ ಅನುಭವವನ್ನು ಒದಗಿಸುತ್ತದೆ. ಬಹುಹಂತದ ಭದ್ರತಾ ವ್ಯವಸ್ಥೆಯು ನೈಜ ಸಮಯದಲ್ಲಿ ಗರಿಷ್ಠ ರಕ್ಷಣೆ ಒದಗಿಸುತ್ತದೆ.
ಈ ನೂತನ ಬಿಡುಗಡೆಯ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್ ಅವರು, “ಬ್ಯಾಂಕಿಂಗ್ ಕ್ಷೇತ್ರವು ದಿನೇದಿನೆ ಡಿಜಿಟಲ್ ಆಗುತ್ತಿರುವಂತೆ, ಗ್ರಾಹಕರು ಸಹಜ, ಬುದ್ಧಿವಂತ, ಸುರಕ್ಷಿತ ಹಾಗೂ ಅತ್ಯಂತ ವೈಯಕ್ತೀಕರಿಸಿದ ಅನುಭವಗಳನ್ನು ನಿರೀಕ್ಷಿಸುತ್ತಿದ್ದಾರೆ. ಬಾಬ್ ವರ್ಲ್ಡ್ 2.0 ಮೂಲಕ ನಾವು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮೊಬೈಲ್ ಬ್ಯಾಂಕಿಂಗ್ ಅನ್ನು ಮರುರೂಪಿಸಿದ್ದೇವೆ. ಹಣಕಾಸು ಕ್ಷೇಮದ ಪರಿಕರಗಳು, ಧ್ವನಿ-ಚಾಲಿತ ಎಐ ಸಂವಹನ ಮತ್ತು ವೈಯಕ್ತಿಕಗೊಳಿಸಿದ ಗ್ರಾಹಕ ಅನುಭವಗಳನ್ನು ಒಂದೇ ವೇದಿಕೆಯಡಿಯಲ್ಲಿ ತಂದಿದ್ದೇವೆ. ಭವಿಷ್ಯದ ದೃಷ್ಟಿಕೋನ ಹೊಂದಿರುವ, ಗ್ರಾಹಕ-ಕೇಂದ್ರಿತ ಸಂಸ್ಥೆಯಾಗಿ, ನಾವು ಸದಾ ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ನಿರಂತರವಾಗಿ ವಿಕಸನಗೊಳ್ಳುವ ಭವಿಷ್ಯ-ಸನ್ನದ್ಧ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧರಾಗಿದ್ದೇವೆ” ಎಂದು ಹೇಳಿದರು.

