


ಶ್ರೀನಿವಾಸಪುರ, ಜು.29: ವೃತ್ತಿಪರತೆ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಮನ್ವಂತರ ಪ್ರಕಾಶನದ ಸಂಸ್ಥಾಪಕ ಪಾ.ಶ್ರೀ. ಅನಂತರಾಮಯ್ಯ ಹೇಳಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ತಮ್ಮ ವೃತ್ತಿಗೆ ಕಳಂಕ ಬಾರದಂತೆ ನಡೆದುಕೊಳ್ಳಬೇಕು. ಪತ್ರಕರ್ತರ ಸಂಘದ ಇತಿಹಾಸ, ಹೋರಾಟ ಹಾಗೂ ಸಾಧನೆಗಳನ್ನು ಹೊಸ ಪೀಳಿಗೆ ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್ ಮಾತನಾಡಿ, ಪತ್ರಕರ್ತರು ಅನಗತ್ಯ ಟೀಕೆಗಳಿಗೆ ಕಿವಿಗೊಡದೆ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಸಹನೆ, ಸಾಮರಸ್ಯ ಹಾಗೂ ಸೇವಾ ಮನೋಭಾವದಿಂದ ಸಂಘವನ್ನು ಇನ್ನಷ್ಟು ಬಲಪಡಿಸಬೇಕು. ಉತ್ತಮ ಕಾರ್ಯಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಜಿ.ಎನ್. ಸುಧೀಂದ್ರ ಮಾತನಾಡಿ, ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾಧ್ಯಮದ ಪಾತ್ರ ಮತ್ತಷ್ಟು ಮಹತ್ವ ಪಡೆದಿದೆ. ಪುಸ್ತಕ ಹಾಗೂ ಪತ್ರಿಕೆಗಳ ಓದುವ ಹವ್ಯಾಸ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಹಿರಿಯ ಸಂಪಾದಕರ ಬರಹಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದವು ಎಂದು ಸ್ಮರಿಸಿದರು.
ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಸಮಾಜದ ಅಭಿವೃದ್ಧಿಗೆ ಪೂರಕವಾಗುವ ವರದಿಗಳು ಮತ್ತು ಲೇಖನಗಳಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ಉಪೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಸನ್ಮಾನಿಸಿ ಸ್ಮರಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನೂ ಗೌರವಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಕಂದಾಯ ಅಧಿಕಾರಿ ಶಂಕರ್, ಪೊಲೀಸ್ ವೃತ್ತ ನಿರೀಕ್ಷಕ ಟಿ. ಶಂಕರಾಚಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್, ಖಜಾಂಚಿ ಎಸ್. ಲಕ್ಷ್ಮಣಬಾಬು, ಉಪಾಧ್ಯಕ್ಷರಾದ ಸಿ.ಕೆ. ಲಕ್ಷ್ಮಣ್ ಹಾಗೂ ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಎಸ್.ಎಚ್. ನಾರಾಯಣಮೂರ್ತಿ ಮತ್ತು ವಿ. ರಮೇಶ್ ಕುಮಾರ್, ಸದಸ್ಯರಾದ ಆರ್. ಚೌಡರೆಡ್ಡಿ, ಶಬ್ಬೀರ್ ಅಹ್ಮದ್, ಚ. ಶ್ರೀನಿವಾಸಮೂರ್ತಿ, ಕೆ.ಎಂ. ಚೌಡಪ್ಪ, ಎನ್. ನಾಗೇಂದ್ರ, ಎಸ್. ವೇಣುಗೋಪಾಲ್, ಆರ್.ಜಿ. ನರಸಿಂಹಯ್ಯ, ಎಚ್. ರಮೇಶ್, ಎಲ್. ಮುರಳಿಮೋಹನ್, ಆರ್. ರವಿಕುಮಾರ್, ಕೆ.ವಿ. ಸುರೇಶ್, ಕಿಶೋರ್ ಕುಮಾರ್, ಜಿ.ಆರ್. ಶ್ರೀನಿವಾಸ್, ನಾಗರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

