

ಕುಂದಾಪುರ, ಜು. 28: ಸೇವೆ, ಸ್ನೇಹ ಹಾಗೂ ನಾಯಕತ್ವದ ಮೌಲ್ಯಗಳನ್ನು ಸಮಾಜದ ಒಳಿತಿಗಾಗಿ ಸಮರ್ಪಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ನಗರದ ಲಯನ್ಸ್ ಸೇವಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಪಿಎಂಜೆಎಫ್ ಲಯನ್ ಇಂಜಿನಿಯರ್ ರಮಾನಂದ್ ಕೆ., ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲರು ಅವರು ಪದಪ್ರದಾನ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಲಯನ್ ಸುದರ್ಶನ್ ಶೆಟ್ಟಿ ಬಿ.ಆರ್. ಅಧ್ಯಕ್ಷರಾಗಿ, ಲಯನ್ ಗುರುಪ್ರಸಾದ್ ಕಾರ್ಯದರ್ಶಿಯಾಗಿ ಹಾಗೂ ಲಯನ್ ಸಂತೋಷ್ ನಾಯ್ಕ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಅರುಣ್ ಕುಮಾರ್ ಹೆಗ್ಡೆ, ಪ್ರಾದೇಶಿಕ ಅಧ್ಯಕ್ಷ ಲಯನ್ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ವಲಯ ಅಧ್ಯಕ್ಷ ಲಯನ್ ಮೊಹಮ್ಮದ್ ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಕಳೆದ ಸಾಲಿನಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಆರೋಗ್ಯ ತಪಾಸಣಾ ಶಿಬಿರಗಳು, ಸಮಾಜಮುಖಿ ಸೇವಾ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಸೇವೆ ಸಲ್ಲಿಸಿದೆ. ವಿಶೇಷವಾಗಿ ಕುಂದಾಪುರ ಕೃಷಿ, ಹಲಸು–ಮಾವು ಮೇಳವನ್ನು ಸತತ ಮೂರು ವರ್ಷ ಯಶಸ್ವಿಯಾಗಿ ಆಯೋಜಿಸಿರುವುದು ಹಾಗೂ ಜಿಲ್ಲಾ ಮಟ್ಟದ ಬ್ಯಾನರ್ ಪ್ರಸ್ತುತಿಕರಣ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಗಳಿಸಿರುವುದು ಕ್ಲಬ್ನ ಗಮನಾರ್ಹ ಸಾಧನೆಗಳಾಗಿವೆ.
ಸಮಾರಂಭದಲ್ಲಿ ಹಿರಿಯ ಲಯನ್ ಎಚ್. ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಲಯನ್ ಸಂತೋಷ್ ನಾಯ್ಕ್ ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಲಯನ್ ಗುರುಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು.
“ಸೇವೆಯೇ ನಮ್ಮ ಸಂಕಲ್ಪ” ಎಂಬ ಧ್ಯೇಯವಾಕ್ಯದೊಂದಿಗೆ ನೂತನ ತಂಡವು ಸಮಾಜಸೇವೆಯ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿತು.

