

ಕೋಲಾರ ಜು.28: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧೀನದಲ್ಲಿರುವ ಎಲ್ಲ ಮಂಡಳಿ, ನಿಗಮ, ಕಾರ್ಪೊರೇಷನ್ಗಳು, ಪ್ರಾಧಿಕಾರಗಳು, ಸಹಕಾರಿ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ವಿವಿಧ ಇಲಾಖೆಗಳ ಸಲಹಾ ಸಮಿತಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಡಳಿತಾತ್ಮಕ ಸಮಿತಿಗಳು ಸೇರಿದಂತೆ ಸರ್ಕಾರದ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಮರ್ಪಕ ಮೀಸಲಾತಿ ಹಾಗೂ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಲ್ಪಸಂಖ್ಯಾತ ಸಮುದಾಯವು ರಾಜ್ಯ ಹಾಗೂ ದೇಶದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದರೂ, ಸರ್ಕಾರದ ನಿರ್ಧಾರ ಕೈಗೊಳ್ಳುವ ವಿವಿಧ ಮಂಡಳಿ-ನಿಗಮಗಳು, ಕಾರ್ಪೊರೇಷನ್ಗಳು, ಪ್ರಾಧಿಕಾರಗಳು, ಸಹಕಾರಿ ಸಂಸ್ಥೆಗಳು ಹಾಗೂ ಸಲಹಾ ಸಮಿತಿಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಭಿವೃದ್ಧಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸುವುದು, ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ಆಯ್ಕೆ ಹಾಗೂ ಸಾರ್ವಜನಿಕ ನೀತಿಗಳ ನಿರ್ಧಾರ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಧ್ವನಿಗೂ ಸಮಾನ ಅವಕಾಶ ದೊರೆಯಬೇಕು. ಆಗ ಮಾತ್ರ ಸಮಾಜದ ನೈಜ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧೀನದಲ್ಲಿರುವ ವಿವಿಧ ಅಭಿವೃದ್ಧಿ ನಿಗಮಗಳು, ಬೋರ್ಡ್ಗಳು, ಪ್ರಾಧಿಕಾರಗಳು, ಸಹಕಾರಿ ಸಂಘಗಳು, ಯೋಜನಾ ಸಮಿತಿಗಳು, ಕಾರ್ಯಪಡೆಗಳು ಹಾಗೂ ವಿವಿಧ ಇಲಾಖೆಗಳ ಸಲಹಾ ಮಂಡಳಿಗಳಲ್ಲಿ ಅರ್ಹ ಅಲ್ಪಸಂಖ್ಯಾತ ಮುಖಂಡರು, ಸಮಾಜಸೇವಕರು, ಶಿಕ್ಷಣ ತಜ್ಞರು ಮತ್ತು ವೃತ್ತಿಪರರಿಗೆ ಅವಕಾಶ ಕಲ್ಪಿಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಸಮಾನ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಮೂಲ ಆಶಯವೇ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವಾಗಿದೆ. ಅದರ ಉದ್ದೇಶಗಳಿಗೆ ಅನುಗುಣವಾಗಿ ಆಡಳಿತದ ವಿವಿಧ ಹಂತಗಳಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಅಗತ್ಯವಾಗಿದೆ ಎಂದು ಶಬ್ಬೀರ್ ಅಹ್ಮದ್ ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ನ್ಯಾಯಯುತ ಪ್ರತಿನಿಧಿತ್ವ ದೊರೆಯುವುದು ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ನೇಮಕಾತಿಗಳಲ್ಲಿ ಪಾರದರ್ಶಕತೆ ಕಾಪಾಡಿ, ಅರ್ಹ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಮಗ್ರ ಅಭಿವೃದ್ಧಿಯ ಆಶಯವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

