

ಶ್ರೀನಿವಾಸಪುರ : ದೇಶದ ಪ್ರಮುಖ ಮಾವು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಹೆಸರುವಾಸಿಯಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಮತ್ತೆ ಮಾವಿನ ಸೀಸನ್ಗೆ ಸಜ್ಜಾಗಿದ್ದು, ಮೇ 15ರಿಂದ ಅಧಿಕೃತವಾಗಿ ಮಾವಿನ ಮಾರುಕಟ್ಟೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹಬ್ಬದಂತ ವಾತಾವರಣ ನಿರ್ಮಾಣವಾಗಿದ್ದು, ರೈತರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರು ಹೊಸ ನಿರೀಕ್ಷೆಗಳೊಂದಿಗೆ ಸೀಸನ್ಗೆ ಎದುರು ನೋಡುತ್ತಿದ್ದಾರೆ.
ಸುಮಾರು 65 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆಯುವ ಶ್ರೀನಿವಾಸಪುರ, ‘ಮಾವಿನ ನಾಡು’ ಹಾಗೂ ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದೆ. ಇಲ್ಲಿನ ಹವಾಮಾನ ಮತ್ತು ಮಣ್ಣಿನ ಗುಣಮಟ್ಟ ಮಾವಿನ ಬೆಳೆಗೆ ಅತ್ಯಂತ ಅನುಕೂಲಕರವಾಗಿದ್ದು, ಉತ್ತಮ ಗುಣಮಟ್ಟದ ಹಣ್ಣು ಉತ್ಪಾದನೆಗೆ ಸಹಕಾರಿಯಾಗಿದೆ.
ಪ್ರಸಿದ್ಧ ತಳಿಗಳ ಸುವಾಸನೆ

ತಾಲೂಕಿನಲ್ಲಿ ಬೆಳೆಯುವ ಮಾವಿನ ತಳಿಗಳು ವೈವಿಧ್ಯಮಯವಾಗಿದ್ದು, ಪ್ರಮುಖವಾಗಿ ಬಾದಾಮಿ, ಮಲ್ಲಿಕಾ, ಬೇನಿಶ್, ಇಮಾಮ್ ಪಸಂದ್, ಪಾಶಾ ಪಸಂದ್, ಶಕ್ಕರ್ ಬೀಜ್, ದೇಸರಿ, ಶೇರಿ ದಿಲ್ ಪಸಂದ್, ಖುದ್ದೂಸ್, ಕೆಸರ್, ಮುಂತಾದ ತಳಿಗಳು ರೈತರ ಆರ್ಥಿಕ ಆಧಾರವಾಗಿವೆ. ಈ ತಳಿಗಳಲ್ಲಿ ಕೆಲವು ದೇಶೀಯ ಮಾರುಕಟ್ಟೆಯಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚು ಬೇಡಿಕೆಯನ್ನು ಹೊಂದಿವೆ.
ದೇಶದಾದ್ಯಂತ ಸಾಗಣೆ – ವಿದೇಶಗಳಿಗೂ ರಫ್ತು
ಶ್ರೀನಿವಾಸಪುರದ ಮಾವುಗಳು ದೇಶದ ವಿವಿಧ ರಾಜ್ಯಗಳಿಗೆ ನಿತ್ಯ ಸಾಗಣೆ ಆಗುತ್ತವೆ. ಪಂಜಾಬ್, ಹರಿಯಾಣ, ರಾಜಸ್ಥಾನ್, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಗೆ ಲಾರಿಗಳ ಮೂಲಕ ಹಣ್ಣುಗಳನ್ನು ಕಳುಹಿಸಲಾಗುತ್ತದೆ.
ಇದರ ಜೊತೆಗೆ ದುಬೈ, ಸೌದಿ ಅರೇಬಿಯಾ, ಸಿಂಗಾಪುರ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಬಾದಾಮಿ, ಮಲ್ಲಿಕಾ ಹಾಗೂ ಬೇನಿಶ್ ತಳಿಯ ಮಾವುಗಳನ್ನು ರಫ್ತು ಮಾಡಲಾಗುತ್ತಿದೆ. ಮಾವಿನಿಂದ ತಯಾರಾಗುವ ಜ್ಯೂಸ್, ಪಲ್ಪ್ ಹಾಗೂ ಇತರ ಮೌಲ್ಯವರ್ಧಿತ ಉತ್ಪನ್ನಗಳಿಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ.
ಮಾರುಕಟ್ಟೆ ಸಿದ್ಧತೆ – ವೇಗ ಪಡೆದ ಕಾರ್ಯಗಳು
ಮೇ 15ರಿಂದ ಮಾರುಕಟ್ಟೆ ಆರಂಭಗೊಳ್ಳಲಿರುವ ಹಿನ್ನೆಲೆ, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ರೈತರು ತಮ್ಮ ಉತ್ಪನ್ನಗಳನ್ನು ಸುಗಮವಾಗಿ ಮಾರಾಟ ಮಾಡಲು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ತೂಕಮಾಪನ, ಸಂಗ್ರಹಣೆ, ಸಾಗಣೆ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಸುಧಾರಿಸಲ್ಪಡುತ್ತಿವೆ.
ಉದ್ಯೋಗಾವಕಾಶಗಳ ಮಹೋತ್ಸವ
ಮಾವಿನ ಸೀಸನ್ ಆರಂಭವಾಗುವುದರಿಂದ ಶ್ರೀನಿವಾಸಪುರದಲ್ಲಿ ಉದ್ಯೋಗಾವಕಾಶಗಳ ಮಹೋತ್ಸವವೇ ಕಾಣಿಸಿಕೊಳ್ಳುತ್ತದೆ. ತಾಲೂಕಿನ ಬಹುತೇಕ ಕುಟುಂಬಗಳು ಈ ಸೀಸನ್ನ ಮೇಲೆ ಅವಲಂಬಿತವಾಗಿದ್ದು, ತೋಟಗಳಲ್ಲಿ ಕಾಯಿ ಕಯ್ಯುವುದು, ಆರಿಸುವುದು, ಪ್ಯಾಕಿಂಗ್, ಲೋಡಿಂಗ್ ಹಾಗೂ ಸಾಗಣೆ ಕಾರ್ಯಗಳಲ್ಲಿ ಸಾವಿರಾರು ಮಂದಿ ತೊಡಗಿಸಿಕೊಳ್ಳುತ್ತಾರೆ.
ವಿಶೇಷವಾಗಿ ಕೂಲಿ ಕಾರ್ಮಿಕರಿಗೆ ಸುಮಾರು ಮೂರು ತಿಂಗಳ ಕಾಲ ತಾತ್ಕಾಲಿಕ ಉದ್ಯೋಗ ದೊರೆಯುತ್ತದೆ, ಇದರಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಮಹಿಳೆಯರು ಸಹ ತೋಟಗಳಲ್ಲಿ ಕಾಯಿ ಕಯ್ಯುವುದು, ಪ್ಯಾಕಿಂಗ್ ಮತ್ತು ವಿಂಗಡಣೆ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಇದೇ ವೇಳೆ ಸಾರಿಗೆ, ಪ್ಯಾಕಿಂಗ್, ಹೋಟೆಲ್, ಚಿಲ್ಲರೆ ವ್ಯಾಪಾರ ಸೇರಿದಂತೆ ಹಲವು ಆರ್ಥಿಕ ಕ್ಷೇತ್ರಗಳು ಈ ಸೀಸನ್ನಿಂದ ಚುರುಕುಗೊಳ್ಳುತ್ತವೆ. ಹೀಗಾಗಿ, ಮಾವಿನ ಸೀಸನ್ ಶ್ರೀನಿವಾಸಪುರದ ಸ್ಥಳೀಯ ಆರ್ಥಿಕ ವ್ಯವಸ್ಥೆಗೆ ದೊಡ್ಡ ಬೆಂಬಲವಾಗಿದೆ.
ಈ ಬಾರಿ ಬೆಳೆ – ಮಿಶ್ರ ನಿರೀಕ್ಷೆ
ಈ ವರ್ಷದ ಹವಾಮಾನ ವ್ಯತ್ಯಾಸಗಳಿಂದ ಕೆಲವು ಬಾದಾಮಿ, ಮಲ್ಲಿಕಾ, ಬೇನಿಶ್, ಇಮಾಮ್ ಪಸಂದ್, ಪಾಶಾ ಪಸಂದ್, ಶಕ್ಕರ್ ಬೀಜ್, ದೇಸರಿ, ಕೇಸರ್ , ತಳಿಗಳ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ರೈತರು ಹಾಗೂ ವ್ಯಾಪಾರಸ್ಥರು ತಿಳಿಸಿದ್ದಾರೆ. ಆದರೆ
ತೋತಾಪುರಿ, ಲಾಲ್ ಬಾಗ್ (ರಾಜಗಿರಾ), ನೀಲಂ, ತಳಿಗಳಲ್ಲಿ ಉತ್ತಮ ಬೆಳೆ ಸಿಗುವ ನಿರೀಕ್ಷೆ ಇದೆ.
ಮತ್ತೊಮ್ಮೆ ದೇಶದ ಗಮನ ಸೆಳೆಯಲು ಸಜ್ಜು
ಒಟ್ಟಾರೆ, ಮೇ 15ರಿಂದ ಆರಂಭಗೊಳ್ಳಲಿರುವ ಮಾವಿನ ಮಾರುಕಟ್ಟೆ ಶ್ರೀನಿವಾಸಪುರದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ರೈತರು ಹಾಗೂ ವ್ಯಾಪಾರಸ್ಥರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸೀಸನ್ ಆರಂಭವಾದ ಬಳಿಕ ಬೆಳೆ ಪ್ರಮಾಣ ಮತ್ತು ಮಾರುಕಟ್ಟೆ ಸ್ಥಿತಿ ಸ್ಪಷ್ಟವಾಗಲಿದ್ದರೂ, ಈ ಬಾರಿ ಕೂಡ ಶ್ರೀನಿವಾಸಪುರ ತನ್ನ ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಮತ್ತೊಮ್ಮೆ ಸಾಬೀತುಪಡಿಸುವ ವಿಶ್ವಾಸದಲ್ಲಿದೆ.
ಮಾವಿನ ಪರಿಮಳದಿಂದ ಕಂಗೊಳಿಸುವ ಶ್ರೀನಿವಾಸಪುರ, ಸಾವಿರಾರು ಕುಟುಂಬಗಳಿಗೆ ಆಶಾಕಿರಣವಾಗಿ ಮತ್ತೆ ಬೆಳಗಲು ಸಜ್ಜಾಗಿದೆ.

