

ಶ್ರೀನಿವಾಸಪುರ, ಏಪ್ರಿಲ್ 14: ತಾಲೂಕಿನ ಶ್ರೀನಿವಾಸಪುರ–ಯಲ್ದೂರು ಮುಖ್ಯ ರಸ್ತೆಯ ಸಮೀಪದಲ್ಲಿರುವ ಜಮೀನೊಂದರಲ್ಲಿ ಅಕ್ರಮವಾಗಿ ಬೆಳೆಯಲಾಗುತ್ತಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಈ ಜಮೀನು ಬೆಂಗಳೂರಿನ ಕೆ.ಆರ್.ಪುರಂ ನಿವಾಸಿ ಲಕ್ಷ್ಮಿ ಅವರಿಗೆ ಸೇರಿದ್ದು, ಅಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆಸಲಾಗುತ್ತಿತ್ತು ಎನ್ನಲಾಗಿದೆ. ಗಾಂಜಾ ಬೆಳೆ ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಂಕರಾಚಾರ್ ಅವರ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು.
ಪರಿಶೀಲನೆಯ ವೇಳೆ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಕರಣ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಮೀನಿನ ಮಾಲೀಕರು ಹಾಗೂ ಈ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಪತ್ತೆಗೆ ತನಿಖೆ ಚುರುಕುಗೊಂಡಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

