

ಶಿವಮೊಗ್ಗ: ನಗರದ ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ತುಂಗಾ ನಗರ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಬುರ್ಖಾ ಧರಿಸಿ ವ್ಯಾನಿಟಿ ಬ್ಯಾಗ್ ಹಿಡಿದು ಮದುವೆ ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ನಗರದ ಇಲಿಯಾಜ್ ನಗರದ ಪ್ರಸಿದ್ಧ ಶಾದಿ ಮಹಲ್ ಮದುವೆ ಮಂದಿರನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮದುವೆ ಸಮಾರಂಭಗಳ ವೇಳೆ ಚಿನ್ನಾಭರಣ ಕಳ್ಳತನದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದವು. ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್ನಲ್ಲಿ ಇಡುವುದನ್ನು ಗಮನಿಸಿ ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು ಎಂದು ತಿಳಿದುಬಂದಿದೆ.
ಕಳೆದ ತಿಂಗಳ ಮದುವೆ ಸಮಾರಂಭದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆಯ ಕೈಯಲ್ಲಿದ್ದ ವಿಶೇಷ ವ್ಯಾನಿಟಿ ಬ್ಯಾಗ್ ಪ್ರಮುಖ ಸುಳಿವಾಗಿ ಪರಿಣಮಿಸಿದ್ದು, ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ರುಕ್ಸಾರ್ ಫಿರ್ದೋಸ್ ಸುಮಾರು 120 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಅದರ ಮೌಲ್ಯ ಅಂದಾಜು 18 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಆಕೆಯ ಬಂಧನದಿಂದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ವಿಚಾರಣೆ ವೇಳೆ ಈ ಹಿಂದೆ ಕಳ್ಳತನ ಮಾಡುವಾಗ ಕೆಲವೆಡೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದರೂ ಮಹಿಳೆಯೆಂದು ಅನುಕಂಪ ತೋರಿಸಿ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದರಿಂದಲೇ ಆಕೆ ಕಳ್ಳತನ ಮುಂದುವರಿಸಿದ್ದಳು ಎಂಬ ಸಂಗತಿ ಬೆಳಕಿಗೆ ಬಂದಿದೆ. ಕೊನೆಗೂ ತುಂಗಾ ನಗರ ಪೊಲೀಸರ ಚಾಣಾಕ್ಷತನದಿಂದ ಆಕೆಯ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ.

